ತಮಿಳುನಾಡು: ಇ-ರೇಷನ್ ಕಾರ್ಡ್ ನಲ್ಲಿ ಕುಟುಂಬ ಸದಸ್ಯರ ಭಾವಚಿತ್ರಗಳ ಬದಲು ಮದ್ಯ ಬಾಟಲಿ!
ಮಧುರೈ: ಅಧಿಕಾರಿಗಳ ಅಚಾತುರ್ಯ, ಉಡಾಫೆಯಿಂದ ಸಂಭವಿಸುವ ಯಡವಟ್ಟುಗಳಿಂದ ಸಾಮಾನ್ಯ ನಾಗರಿಕರು ಹೈರಾಣಾಗುವುದು ಇತ್ತೀಚಿಗೆ ಮಾಮೂಲಿ ಸಂಗತಿಯಾಗಿ ಬದಲಾಗಿದೆ. ಇಂತಹುದೇ ಅಧಿಕಾರಿಗಳ ಅಚಾತುರ್ಯದಿಂದಾಗಿ, ಇ-ಪಡಿತರ ಚೀಟಿಯ ಮೇಲೆ ಕುಟುಂಬದ ಸದಸ್ಯರ ಭಾವಚಿತ್ರಗಳ ಬದಲು ಮದ್ಯದ ಬಾಟಲಿ ಮುದ್ರಣಗೊಂಡಿರುವ ವಿಚಿತ್ರ ಘಟನೆ ತಮಿಳುನಾಡಿನ ಪೆರೈಯೂರ್ ತಾಲೂಕಿನ ಚಿನ್ನಪುಲಂಪಟ್ಟಿ ಗ್ರಾಮದಲ್ಲಿ ನಡೆದಿದೆ. ಈ ತಪ್ಪನ್ನು ಶೀಘ್ರವೇ ಸರಿಪಡಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
“ಇತ್ತೀಚೆಗೆ ವಿವಾಹಿತಳಾದ ನನ್ನ ಮಗಳ ಹೆಸರನ್ನು ತೆಗೆದು ನನ್ನ ಪತ್ನಿಯ ಹೆಸರನ್ನು ತಮಿಳುನಾಡು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಯೋಜನೆಯ ಫಲಾನುಭವಿಯಾಗಿ ಸೇರಿಸಲು ಕಾರ್ಡ್ ನವೀಕರಿಸುವಾಗ ಅಚಾತುರ್ಯ ಗಮನಕ್ಕೆ ಬಂದಿದೆ. ಕಾರ್ಡ್ ನವೀಕರಣಕ್ಕಾಗಿ ಇ-ಪಡಿತರ ಕಾರ್ಡ್ ಅನ್ನು ಹುಡುಕಿದಾಗ, ಕಾರ್ಡ್ ನಲ್ಲಿ ಫೋಟೊ ಬದಲಿಗೆ ಮದ್ಯದ ಬಾಟಲಿಯ ಚಿತ್ರ ಕಂಡು ಬಂದಿದೆ” ಎಂದು ತಂಗವೇಲ್ ಹೇಳಿದ್ದಾರೆ.
“ಪಡಿತರ ಚೀಟಿಯ ಮುದ್ರಿತ ಪ್ರತಿಯಲ್ಲಿ ಈ ಸಮಸ್ಯೆಯಿಲ್ಲದಿರುವುದರಿಂದ, ಇ-ಪಡಿತರ ಚೀಟಿಯಲ್ಲಿ ಈ ಸಮಸ್ಯೆ ನುಸುಳಿರುವುದನ್ನು ಕಂಡು ನಮಗೆ ಆಘಾತವಾಯಿತು. ಹೀಗಿದ್ದೂ, ನಾವು ಈ ಕುರಿತು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ” ಎಂದು ಸಿ.ತಂಗವೇಲ್ ತಿಳಿಸಿದ್ದಾರೆ ಎಂದು The New Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಪರಿಶೀಲನೆ ನಡೆಸಿರುವ ಇಲಾಖೆಯು, 2018ರಲ್ಲಿಯೇ ತಂಗವೇಲ್ ಅವರ ಪಡಿತರ ಚೀಟಿಗೆ ಮದ್ಯದ ಬಾಟಲಿಯ ಭಾವಚಿತ್ರವನ್ನು ಸೇರ್ಪಡೆ ಮಾಡಲಾಗಿದೆ ಎಂದು ದೃಢಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವಜಿಲ್ಲಾ ಸರಬರಾಜು ಅಧಿಕಾರಿ (ಡಿಎಸ್‌ಒ) ಮುತ್ತು ಮರುಗನ್ ಪಾಂಡಿ, “ಈ ವಿಷಯ ತಿಳಿದು ಅಚ್ಚರಿಯಾಗಿದೆ. ಇದು ಅಪರೂಪದ ವಿಷಯವಾಗಿದೆ. ಇದು ಒಂದು ಸ್ವರೂಪದ ದೋಷವಾಗಿದ್ದು, ಪ್ರಕ್ರಿಯೆಯ ಸಂದರ್ಭದಲ್ಲಿ ಈ ದೋಷ ಕಂಡು ಬಂದಿಲ್ಲ. ಹೀಗಿದ್ದೂ, ನಾವು ತಾಲೂಕು ಅಧಿಕಾರಿಗಳೊಂದಿಗೆ ಪರಿಶೀಲಿಸಲಿದ್ದೇವೆ. ಎಷ್ಟು ಶೀಘ್ರ ಸಾಧ್ಯವೊ ಅಷ್ಟು ಶೀಘ್ರ ಈ ಸಮಸ್ಯೆಯನ್ನು ಪರಿಹರಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಇನ್ನು 24 ಗಂಟೆಗಳೊಳಗಾಗಿ ಈ ಲೋಪವನ್ನು ಸರಿಪಡಿಸಲಾಗುವುದು ಎಂದು ಸಂತ್ರಸ್ತ ಕುಟುಂಬಕ್ಕೆ ಭರವಸೆ ನೀಡಲಾಗಿದೆ.