×
Ad

'ಮೋಸ್ಟ್ ವಾಂಟೆಡ್' ಮಾವೋವಾದಿ ನಾಯಕ ಮದ್ವಿ ಹಿದ್ಮಾ ಎನ್​ಕೌಂಟರ್​​ ನಲ್ಲಿ ಹತ್ಯೆ; ವರದಿ

Update: 2025-11-18 14:04 IST

ಮದ್ವಿ ಹಿದ್ಮಾ (Photo: X)

ಅಲ್ಲೂರಿ ಸೀತಾರಾಮ ರಾಜು (ಆಂಧ್ರಪ್ರದೇಶ): ಮಾವೋವಾದಿ ಚಳವಳಿಯಲ್ಲಿನ ಅತ್ಯಂತ ಪ್ರಭಾವಿ ಹಾಗೂ “ಮೋಸ್ಟ್ ವಾಂಟೆಡ್” ನಾಯಕನಲ್ಲಿ ಒಬ್ಬನಾದ ಮದ್ವಿ ಹಿದ್ಮಾ (51) ಮಂಗಳವಾರ ಬೆಳಿಗ್ಗೆ ಭದ್ರತಾ ಪಡೆಯೊಂದಿಗೆ ನಡೆದ ಎನ್ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ ಎಂದು indianexpress.com ವರದಿ ಮಾಡಿದೆ.

ಹಿದ್ಮಾ ಅಲಿಯಾಸ್ ಸಂತೋಷ್, ಆತನ ಪತ್ನಿ ಸೇರಿದಂತೆ ಇನ್ನೂ ನಾಲ್ವರು ಛತ್ತೀಸ್‌ಗಢದಿಂದ ಪಲಾಯನಗೊಳ್ಳುತ್ತಿದ್ದಾಗ, ಮಾರೆಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ 6ರಿಂದ 7 ಗಂಟೆಯ ನಡುವೆ ಭದ್ರತಾ ಪಡೆಗಳು ಅವರನ್ನು ಸುತ್ತುವರೆದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಕಳೆದ ಕೆಲವು ವಾರಗಳಿಂದ ಆಂಧ್ರ-ಛತ್ತೀಸ್‌ಗಢ-ಒಡಿಶಾ ಗಡಿಯ ಮೇಲೆ ಮಾವೋವಾದಿಗಳ ಚಲನವಲನ ಹೆಚ್ಚಿರುವುದಾಗಿ ರಾಜ್ಯಗಳ ಗುಪ್ತಚರ ಇಲಾಖೆಗಳು ಮತ್ತು ಕೇಂದ್ರ ಗುಪ್ತಚರ ದಳದಿಂದ ಮಾಹಿತಿ ಬಂದಿತ್ತು. ಅದರ ಆಧಾರದ ಮೇಲೆ ನಡೆಸಿದ ಕಾರ್ಯಾಚರಣೆ ಇಂದು ಯಶಸ್ವಿಯಾಗಿದೆ” ಎಂದು ಉನ್ನತ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿದ್ಮಾ ಕೇಂದ್ರ ಸಮಿತಿ ಸದಸ್ಯನಾಗಿದ್ದು, ದಂಡಕಾರಣ್ಯ ವಿಶೇಷ ವಲಯ ಸಮಿತಿಯನ್ನು ಮುನ್ನಡೆಸುತ್ತಿದ್ದ ಎನ್ನಲಾಗಿದೆ. ಕನಿಷ್ಠ 26 ಮಾರಕ ಸಶಸ್ತ್ರ ದಾಳಿಗಳ ಹಿಂದಿನ ಸೂತ್ರಧಾರ ಎಂದು ಭದ್ರತಾ ಪಡೆಗಳು ಹೇಳಿವೆ.

ಇತ್ತೀಚೆಗೆ ಶರಣಾಗಿದ್ದ ಮಲ್ಲೊಜುಲ ವೇಣುಗೋಪಾಲ ರಾವ್ (ಸೋನು) ನಂತರ, ಹಿದ್ಮಾ ಮುಂದಿನ ಗುರಿಯಾಗಬಹುದು ಎಂದು ಭದ್ರತಾ ವಲಯದಲ್ಲಿ ಯೋಜನೆಗಳನ್ನು ರೂಪಿಸಲಾಗಿತ್ತು. “ಹಿಡ್ಮಾ ಸಂಘಟನೆಯ ಅತ್ಯಂತ ಅಪಾಯಕಾರ ಕಮಾಂಡರ್. ಆತನಿಗಾಗಿ ಹುಡುಕಾಟ ತೀವ್ರಗೊಳ್ಳಲಿದೆ” ಎಂದು ಉನ್ನತ ಅಧಿಕಾರಿಯೊಬ್ಬರು ಈ ಹಿಂದೆಯೇ ಹೇಳಿದ್ದರು.

ರವಿವಾರ ತಡರಾತ್ರಿ ನಕ್ಸಲ್ ವಿರೋಧಿ ಗ್ರೇಹೌಂಡ್ಸ್ ಮತ್ತು ಸ್ಥಳೀಯ ಪೊಲೀಸರು ಗಡಿಯ ಕಾಡುಗಳಲ್ಲಿ ಕೂಂಬಿಂಗ್ ಆರಂಭಿಸಿದ್ದರು. ಸೋಮವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ.

“ಒಟ್ಟು ಆರು ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ. ನಮ್ಮ ಪಡೆಗಳು ಹಿಂತಿರುಗಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ” ಎಂದು ಎಸ್‌ಪಿ ಅಮಿತ್ ಬರ್ದಾರ್ Indian Express ಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News