ಮಹಾದೇವ ಬೆಟ್ಟಿಂಗ್ ಆ್ಯಪ್ ಆರೋಪಿಯ ತಂದೆ ಛತ್ತೀಸ್‌ಗಡದಲ್ಲಿ ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಮಹಾದೇವ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿಯೊಬ್ಬನ ತಂದೆಯು ಛತ್ತೀಸ್‌ಗಡದ ದುರ್ಗ್ ಜಿಲ್ಲೆಯ ಗ್ರಾಮವೊಂದರಲ್ಲಿ ಸಂದೇಹಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಸುಶೀಲ್ ದಾಸ್ (62) ನಾಪತ್ತೆಯಾಗಿದ್ದು, ಆತನ ಮೃತದೇಹ ಮಂಗಳವಾರ ಮಧಾಹ್ನ ಆಂಡಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಅಚ್ಚೊಟಿ ಗ್ರಾಮದ ಬಾವಿಯೊಂದರಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣವೆಂಬಂತೆ ತೋರುತ್ತದೆ ಎಂದು ದುರ್ಗ್‌ನ ಹಿರಿಯ ಪೊಲೀಸ್ ಅಧೀಕ್ಷಕ ರಾಮ್‌ಗೋಪಾಲ್ ಗಾರ್ಗ್ ತಿಳಿಸಿದ್ದಾರೆ.
ಮೃತ ಸುಶೀಲ್ ದಾಸ್, ಮಹಾದೇವ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ನಗದು ಕೋರಿಯರ್ ಆಗಿ ಕೆಲಸ ಮಾಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯ(ಈಡಿ)ದಿಂದ ಬಂಧಿಸಲ್ಪಟ್ಟಿದ್ದ ಆಸೀಮ್ ದಾಸ್‌ನ ತಂದೆಯೆಂದು ಪೊಲೀಸರು ತಿಳಿಸಿದ್ದಾರೆ.
ಸುಶೀಲ್ ದಾಸ್ ಖಾಸಗಿ ಕಂಪೆನಿಯೊಂದರಲ್ಲಿ ಭದ್ರತಾ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ರವಿವಾರ ಸಂಜೆಯಿಂದ ಆತ ನಾಪತ್ತೆಯಾಗಿದ್ದ. ಇದೊಂದು ಆತ್ಮಹತ್ಯೆ ಪ್ರಕರಣದ ಹಾಗೆ ಭಾಸವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ. ಆಸೀಮ್ ದಾಸ್ ಹಾಗೂ ಇನ್ನೋರ್ವ ಆರೋಪಿ ಕಾನ್‌ಸ್ಟೇಬಲ್ ಭೀಮ ಸಿಂಗ್ ಯಾದವ್‌ನನ್ನು ಜಾರಿ ನಿರ್ದೇಶನಾಲಯವು ನವೆಂಬರ್ 3ರಂದು ಬಂಧಿಸಿತ್ತು.
ಮಹಾದೇವ ಬೆಟ್ಟಿಂಗ್ ಆ್ಯಪ್‌ನ ಪ್ರವರ್ತಕರು, ಛತ್ತೀಸ್‌ಗಡದ ನಿರ್ಗಮನ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರಿಗೆ ಸುಮಾರು 508 ಕೋಟಿ ರೂ.ಗಳನ್ನು ಪಾವತಿಸಿದ್ದಾರೆಂದು ಕ್ಯಾಶ್ ಕೋರಿಯರ್ ಆಸೀಮ್ ದಾಸ್ ವಿಚಾರಣೆ ವೇಳೆ ತಿಳಿಸಿರುವುದಾಗಿ ಜಾರಿ ನಿರ್ದೇಶನಾಲಯ ಹೇಳಿತ್ತು ಹಾಗೂ ಈ ಬಗ್ಗೆ ತನಿಖೆ ನಡೆಸುವುದಾಗಿಯೂ ಅದು ತಿಳಿಸಿತ್ತು.
ತನ್ನ ಮೇಲಿನ ಆರೋಪಗಳನ್ನು ಬಾಘೇಲ್ ಬಲವಾಗಿ ತಳ್ಳಿಹಾಕಿದ್ದರು ಹಾಗೂ ಜಾರಿ ನಿರ್ದೇಶನಾಲಯವನ್ನು ಬಿಜೆಪಿಯು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆಪಾದಿಸಿದ್ದರು.
ಆಸೀಮದಾಸ್‌ನ್ನು ಈಡಿ ಅಧಿಕಾರಿಗಳು ರಾಯಪುರದಲ್ಲಿ ಬಂಧಿಸಿದ್ದರು ಹಾಗೂ ಆತನಿಂದ 5.39 ಕೋಟಿರೂ. ನಗದನ್ನು ವಶಪಡಿಸಿಕೊಂಡಿರುವುದಾಗಿಯೂ ಅವರು ತಿಳಿಸಿದ್ದರು.
ಆ್ಯಪ್‌ನ ಪ್ರವರ್ತಕರು ಯುಎಇನಿಂದ ದೊಡ್ಡ ಮೊತ್ತದ ಹಣವನ್ನು ಕಾಂಗ್ರೆಸ್ ಪಕ್ಷದ ವಿಧಾನಸಭಾ ಚುನಾವಣಾ ವೆಚ್ಚಗಳಿಗಾಗಿ ಬಾಘೇಲ್ ಅವರಿಗೆ ರವಾನಿಸಿದ್ದರೆಂದು ಈಡಿ ಆರೋಪಿಸಿತ್ತು.