ಮಹಾರಾಷ್ಟ್ರದಲ್ಲಿ ಭಾರೀ ಮಳೆ | ಮೂವರು ಮೃತ್ಯು, 120 ಮಂದಿಯ ರಕ್ಷಣೆ
PC : X
ಮುಂಬೈ, ಸೆ. 17: ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆಗಳ ಕಾಲ ಸುರಿದ ಭಾರೀ ಮಳೆಯ ಸಂದರ್ಭ ಮೂವರು ಸಾವನ್ನಪ್ಪಿದ್ದಾರೆ ಹಾಗೂ 120ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮಂಗಳವಾರ ತಿಳಿಸಿದೆ.
ನೆರೆ ಪೀಡಿತ ಜಿಲ್ಲೆಗಳಿಂದ ಜನರ ತೆರವು ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ಇತರ ರಕ್ಷಣಾ ತಂಡಗಳು ಭಾಗಿಯಾಗಿವೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಮರಾಠವಾಡದ 8 ಜಿಲ್ಲೆಗಳ ಪೈಕಿ 5 ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆ ಸುರಿದಿದೆ. ಮಂಗಳವಾರ ಬೆಳಗ್ಗಿನ ವರೆಗೆ 24 ಗಂಟೆಗಳಲ್ಲಿ ಬೀಡ್ ನಲ್ಲಿ ಅತ್ಯಧಿಕ 143.7 ಎಂಎ ಮಳೆ ಸುರಿದಿದೆ. ನಾಂದೇಡ್‌ನಲ್ಲಿ 131.6 ಎಂಎಂ ಹಾಗೂ ಜಲ್ನಾದಲ್ಲಿ 121.4 ಎಂಎಂ ಮಳೆ ಸುರಿದಿದೆ ಎಂದು ಅದು ತಿಳಿಸಿದೆ.
ನದಿಗಳು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಬೀಡ್ ಹಾಗೂ ಅಹಿಲ್ಯಾನಗರ್ ತೀವ್ರ ಪೀಡಿತವಾಗಿವೆ. ಈ ಪ್ರದೇಶಗಳಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಚರಣೆಗಳನ್ನು ನಡೆಸಲಾಗಿದೆ. 120ಕ್ಕೂ ಅಧಿಕ ಜನರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆರವು ಹಾಗೂ ತುರ್ತು ಪರಿಹಾರ ಕಾರ್ಯಾಚರಣೆಗೆ ಸ್ಥಳೀಯಾಡಳಿತಕ್ಕೆ ನೆರವು ನೀಡಲು ಎನ್‌ಡಿಆರ್‌ಎಫ್ ರಾಜ್ಯಾದ್ಯಂತ 12 ತಂಡಗಳನ್ನು ನಿಯೋಜಿಸಿದೆ. ರಾಜ್ಯ ಸಂಸ್ಥೆಗಳು ಹಾಗೂ ಜಿಲ್ಲಾಡಳಿತಗಳು ಅಗ್ನಿ ಶಾಮಕ ದಳಗಳು, ಪೊಲೀಸ್ ಘಟಕಗಳು ಹಾಗೂ ಸ್ಥಳೀಯ ಸ್ವಯಂಸೇವಕರನ್ನು ಕಳುಹಿಸಿ ಕೊಟ್ಟಿದೆ.
ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿ ಘಟನೆಗಳಲ್ಲಿ ಬೀಡ್ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಾಗಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.