Maharashtra | ಕಾಂಗ್ರೆಸ್ MLC ಬಿಜೆಪಿ ಸೇರ್ಪಡೆ
ಪ್ರಜ್ಞಾ ಸಾತವ್ | Photo Credit : X
ಮುಂಬೈ, ಡಿ. 18: ಮಹಾರಾಷ್ಟ್ರ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯೆ ಪ್ರಜ್ಞಾ ಸಾತವ್ ಗುರುವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. 49 ವರ್ಷದ ಸಾತವ್ ಮುಂಬೈಯ ನರಿಮನ್ ಪಾಯಿಂಟ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ತನ್ನ ಗಂಡ, ರಾಜ್ಯಸಭಾ ಸದಸ್ಯ ರಾಜೀವ್ ಸಾತವ್ 2021ರಲ್ಲಿ ನಿಧನರಾದ ಬಳಿಕ, ಪ್ರಜ್ಞಾ 2021ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಟಿಕೆಟ್‌ನಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದರು. 2024ರಲ್ಲಿ ಅವರು ವಿಧಾನ ಪರಿಷತ್‌ಗೆ ಮರು ಆಯ್ಕೆಯಾದರು. ಅವರ ಅವಧಿ 2030 ಜುಲೈಯಲ್ಲಿ ಕೊನೆಗೊಳ್ಳಲಿತ್ತು.
ಅವರು ಮರಾಠವಾಡ ವಲಯದ ಹಿಂಗೋಲಿ ಜಿಲ್ಲೆಯವರಾಗಿದ್ದು, ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೇರಿದವರಾಗಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಡುವೆಯೇ ಅವರು ಕಾಂಗ್ರೆಸ್:ನಿಂದ ಹೊರಗೆ ಕಾಲಿಟ್ಟಿರುವುದು ಪಕ್ಷಕ್ಕೆ ಹಿನ್ನಡೆ ಎಂಬುದಾಗಿ ಭಾವಿಸಲಾಗಿದೆ. ಅವರ ಗಂಡ ರಾಜೀವ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ನಿಕಟವರ್ತಿಯಾಗಿದ್ದರು.