ಮಹಾರಾಷ್ಟ್ರ: ಹೆರಿಗೆಗಾಗಿ 6 ಕಿ.ಮೀ.ನಡೆದುಕೊಂಡು ಹೋದ ಗರ್ಭಿಣಿ: ಆಸ್ಪತ್ರೆಯಲ್ಲಿ ಮೃತ್ಯು
ಸಾಂದರ್ಭಿಕ ಚಿತ್ರ
ಗಡ್ಚಿರೋಳಿ, ಜ. 3: ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯ ಆಲ್ದಂಡಿ ತೋಲಾ ಗ್ರಾಮ ಮುಖ್ಯ ರಸ್ತೆಯಿಂದ ಸಂಪರ್ಕ ಕಡಿತಗೊಂಡಿರುವುದರಿಂದ ಹಾಗೂ ಅಲ್ಲಿ ಹೆರಿಗೆಗೆ ಯಾವುದೇ ಸೌಲಭ್ಯಗಳು ಇಲ್ಲದೇ ಇರುವುದರಿಂದ 6 ಕಿ.ಮೀ. ನಡೆದುಕೊಂಡು ಹೋದ ಗರ್ಭಿಣಿಯೋರ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮೃತಪಟ್ಟ ಮಹಿಳೆಯನ್ನು ಗಡ್ಚಿರೋಳಿ ಜಿಲ್ಲೆಯ ಎಟಾಪಲ್ಲಿ ತಾಲೂಕಿನ ಆಲ್ದಂಡಿ ತೋಲಾ ಗ್ರಾಮದ ನಿವಾಸಿ ಆಶಾ ಸಂತೋಷ್ ಕಿರಂಗಾ (24) ಎಂದು ಗುರುತಿಸಲಾಗಿದೆ. ಅವರು 9 ತಿಂಗಳ ಗರ್ಭಿಣಿಯಾಗಿದ್ದರು.
‘‘ಆಶಾ ಅವರ ಹುಟ್ಟೂರು ಆಲ್ದಂಡಿ ತೋಲಾ ಗ್ರಾಮ ಮುಖ್ಯ ರಸ್ತೆಯಿಂದ ಸಂಪರ್ಕ ಕಡಿತಗೊಂಡಿದೆ. ಗ್ರಾಮದಲ್ಲಿ ಹೆರಿಗೆಗೆ ಯಾವುದೇ ಸೌಲಭ್ಯಗಳಿಲ್ಲ. ಸಕಾಲದಲ್ಲಿ ತನಗೆ ಚಿಕಿತ್ಸೆ ದೊರೆಯುತ್ತದೆ ಎಂದು ಅವರು ನಿರೀಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಜನವರಿ 1ರಂದು ತನ್ನ ಪತಿಯೊಂದಿಗೆ ತೆರಳಿದ್ದರು. ಅವರು ಪೇಥಾದಲ್ಲಿರುವ ಸಹೋದರಿ ಮನೆಗೆ ಕಾಡು ದಾರಿಯ ಮೂಲಕ 6 ಕಿ.ಮೀ. ನಡೆದುಕೊಂಡು ಹೋದರು. ಆದರೆ, ದೀರ್ಘ ಹಾಗೂ ಕಷ್ಟಕರ ಪ್ರಯಾಣ ಅವರ ದೇಹದ ಮೇಲೆ ಪರಿಣಾಮ ಬೀರಿತು’’ ಎಂದು ಅವರು ತಿಳಿಸಿದ್ದಾರೆ.
‘‘ಜನವರಿ 2ರಂದು ಬೆಳಗ್ಗೆ ಅವರಿಗೆ ತೀವ್ರ ಹೆರಿಗೆ ನೋವು ಆರಂಭವಾಯಿತು. ಅವರನ್ನು ಆ್ಯಂಬುಲೆನ್ಸ್ ಮೂಲಕ ಹೆದ್ರಿಯಲ್ಲಿರುವ ಕಾಳಿ ಅಮ್ಮಾಳ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಸಿಸರಿಯನ್ ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದ್ದರು. ಆದರೆ, ತುಂಬಾ ತಡವಾಗಿತ್ತು. ಮಗು ಗರ್ಭದ ಒಳಗೆ ಮೃತಪಟ್ಟಿತ್ತು. ರಕ್ತದೊತ್ತಡ ಹೆಚ್ಚಾದುದರಿಂದ ಅವರು ಕೂಡ ಸ್ವಲ್ಪ ಹೊತ್ತಿನಲ್ಲಿ ಮೃತಪಟ್ಟರು’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಗಡ್ಚಿರೋಳಿಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. \ಪ್ರತಾಪ್ ಶಿಂದೆ ಅವರನ್ನು ಪತ್ರಕರ್ತರು ಸಂಪರ್ಕಿಸಿದರು. ಈ ಸಂದರ್ಭ ಅವರು, ಮಹಿಳೆಯನ್ನು ಹೆರಿಗೆಗೆ ಆಶಾ ಕಾರ್ಯಕರ್ತರ ಮೂಲಕ ನೋಂದಾಯಿಸಲಾಗಿತ್ತು ಎಂದು ತಿಳಿಸಿದ್ದಾರೆ.
‘‘ನಡೆಯುವುದರಿಂದ ಹಠಾತ್ ಹೆರಿಗೆ ನೋವು ಹಾಗೂ ತೊಂದರೆಗಳು ಉಂಟಾಗಬಹುದು. ವೈದ್ಯರು ಅವರ ಜೀವ ಉಳಿಸಲು ಪ್ರಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ತಾಲೂಕು ಆರೋಗ್ಯ ಅಧಿಕಾರಿಯಿಂದ ವಿವರವಾದ ವರದಿ ಕೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು’’ ಎಂದು ಅವರು ಹೇಳಿದ್ದಾರೆ.