Maharashtra | ಮಾಜಿ ರಾಜ್ಯಪಾಲರಿಗೆ ಪದ್ಮ ಪ್ರಶಸ್ತಿ: ವಿರೋಧ ಪಕ್ಷಗಳ ಅಸಮಾಧಾನಕ್ಕೆ ಕಾರಣವೇನು?
Photo Credit : NDTV
ಹೊಸದಿಲ್ಲಿ: ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ ಸುಮಾರು ಮೂರು ವರ್ಷಗಳ ನಂತರ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಆದರೆ, ತಮ್ಮ ಅವಧಿಯಲ್ಲಿ ರಾಜ್ಯದ ಮುಖ್ಯಸ್ಥರಾಗಿ ಅವರು ಕಾರ್ಯನಿರ್ವಹಿಸಿದ ರೀತಿಯ ಬಗ್ಗೆ ವಿರೋಧ ಪಕ್ಷಗಳ ನಾಯಕರ ಮನಸ್ಸಿನಲ್ಲಿ ಈಗಲೂ ಅಸಮಾಧಾನ ಮನೆಮಾಡಿದ್ದು, ಅವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಈ ನಿರ್ಧಾರವನ್ನು ಶಿವಸೇನೆ (ಉದ್ಧವ್ ಬಣ)ದ ನಾಯಕ ಸಂಜಯ್ ಸಿಂಗ್ ಖಂಡಿಸಿದ್ದು, ಕೋಶಿಯಾರಿ ವಿರುದ್ಧದ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಸರಕಾರವನ್ನು ಪತನಗೊಳಿಸುವ ಮೂಲಕ ಅವರು ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಹತ್ಯೆಗೈದಿದ್ದರು ಎಂದು ಅವರು ಆರೋಪಿಸಿದ್ದಾರೆ.
ಇದರ ಬೆನ್ನಿಗೇ ಏಕನಾಥ ಶಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
“ಕೋಶಿಯಾರಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಹತ್ಯೆಗೈದು ಉದ್ಧವ್ ಠಾಕ್ರೆ ಸರಕಾರವನ್ನು ಪತನಗೊಳಿಸಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 2019ರಿಂದ ಫೆಬ್ರವರಿ 2023ರವರೆಗೆ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಕೋಶಿಯಾರಿ ಹಲವು ವಿವಾದಗಳಿಗೆ ಕಾರಣರಾಗಿದ್ದರು. ನವೆಂಬರ್ 2019ರಲ್ಲಿ ಮುಂಜಾನೆ ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್ ಅವರಿಗೆ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರಮಾಣವಚನ ಬೋಧಿಸುವ ಮೂಲಕ ಅವರು ವಿವಾದಾಸ್ಪದರಾಗಿದ್ದರು. ಬಿಜೆಪಿ ಮತ್ತು ಶಿವಸೇನೆ ನಡುವೆ ಅಧಿಕಾರ ಕಾದಾಟ ನಡೆಯುತ್ತಿದ್ದ ಸಮಯದಲ್ಲೇ ಅವರು ಇಂತಹ ದಿಢೀರ್ ಕ್ರಮ ಕೈಗೊಂಡಿದ್ದರು.
ಆದರೆ, ಆ ಸರಕಾರ ಕೇವಲ ಮೂರು ದಿನಗಳಷ್ಟೇ ಅಸ್ತಿತ್ವದಲ್ಲಿತ್ತು. ಈ ಬೆಳವಣಿಗೆ ರಾಜ್ಯದ ಭವಿಷ್ಯದ ರಾಜಕೀಯ ಸ್ಥಿತ್ಯಂತರಕ್ಕೆ ಮುನ್ನಂದಾಜಿನಂತೆಯೇ ಪರಿಣಮಿಸಿತು.
2022ರಲ್ಲಿ ಏಕನಾಥ ಶಿಂದೆ ಬಂಡಾಯ ಎದ್ದ ಬಳಿಕ, ಬಹುಮತ ಸಾಬೀತುಪಡಿಸುವಂತೆ ಉದ್ಧವ್ ಠಾಕ್ರೆಗೆ ಸೂಚಿಸಿದ್ದ ಅವರ ಕ್ರಮವೂ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಬೆಳವಣಿಗೆಯಿಂದ ಶಿವಸೇನೆ ಇಬ್ಭಾಗವಾಗಿತ್ತು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಕೋಶಿಯಾರಿ ನೀಡಿದ್ದ ನಿರ್ದೇಶನಕ್ಕೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿದ ಬೆನ್ನಿಗೇ, ಉದ್ಧವ್ ಠಾಕ್ರೆ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.
ಈ ರೀತಿಯ ಹಲವು ವಿವಾದಗಳಲ್ಲಿ ಭಗತ್ ಸಿಂಗ್ ಕೋಶಿಯಾರಿ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಅವರಿಗೆ ನೀಡಲಾಗಿರುವ ಪದ್ಮ ಪ್ರಶಸ್ತಿಯ ಬಗ್ಗೆ ವಿರೋಧ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.