ಮಹಾರಾಷ್ಟ್ರ | ಆದಾಯ ಗಳಿಕೆಗೆ ಸರಕಾರಿ ಭೂಮಿಯ ಪರಭಾರೆ ಬಗ್ಗೆ ಕಳವಳ : ನಿವೃತ್ತ ನ್ಯಾಯಾಧೀಶರು, ಸಾಮಾಜಿಕ ಹೋರಾಟಗಾರರಿಂದ ಸಿಎಂಗೆ ಪತ್ರ
ದೇವೇಂದ್ರ ಫಡ್ನವೀಸ್ | Photo Credit : PTI
ಮುಂಬೈ,ನ.13: 127 ಮುಂಬಯಿಗರ ಗುಂಪೊಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರವೊಂದನ್ನು ಬರೆದು ಆದಾಯ ಗಳಿಕೆಗಾಗಿ ನಗರದಲ್ಲಿಯ ಸರಕಾರಿ ಭೂಮಿಯ ವಿವೇಚನಾರಹಿತ ಪರಭಾರೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಪತ್ರಕ್ಕೆ ಸಹಿ ಹಾಕಿದವರಲ್ಲಿ ನಿವೃತ್ತ ಸರಕಾರಿ ಅಧಿಕಾರಿಗಳು,ಮಾಜಿ ನ್ಯಾಯಾಧೀಶರು, ನಿವೃತ್ತ ರಕ್ಷಣಾ ಸಿಬ್ಬಂದಿಗಳು,ಶಿಕ್ಷಣ ತಜ್ಞರು,ಪತ್ರಕರ್ತರು, ವಕೀಲರು ಮತ್ತು ಸಾಮಾಜಿಕ ಹೋರಾಟಗಾರರು ಸೇರಿದ್ದಾರೆ.
ರೈಲ್ವೆ, ಮಿಲ್‌ಗಳು ಮತ್ತು ಬಂದರಿಗೆ ಸೇರಿದ ಜಮೀನು ಹಾಗೂ ಇತರ ಸರಕಾರಿ ಸ್ವಾಮ್ಯದ ಭೂಪ್ರದೇಶಗಳು ಸೇರಿದಂತೆ ಮುಂಬೈನಲ್ಲಿಯ ಸಾರ್ವಜನಿಕ ಭೂಮಿಯನ್ನು ‘ಆದಾಯ ಸೃಷ್ಟಿ’ಯ ಹೆಸರಿನಲ್ಲಿ ವಾಣಿಜ್ಯ ಮತ್ತು ಊಹಾತ್ಮಕ ಅಭಿವೃದ್ಧಿಗಳಿಗಾಗಿ ನೀಡಲಾಗುತ್ತಿದೆ ಎಂದು ಹೇಳಿರುವ ಪತ್ರವು, ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಅಥವಾ ಉತ್ತರದಾಯಿತ್ವದ ಕೊರತೆಯಿದೆ ಎಂದು ಆರೋಪಿಸಿದೆ.
ಮೇಲ್ಮೈ ಭೂಮಿಯನ್ನು ಅಭಿವೃದ್ಧಿಗಾಗಿ ಮುಕ್ತಗೊಳಿಸಲು ಹಳಿಗಳನ್ನು ಭೂಗತಕ್ಕೆ ಸ್ಥಳಾಂತರಿಸುವ ಸಲಹೆಗಳು ಸೇರಿದಂತೆ ರೈಲ್ವೆ ಭೂಮಿಯನ್ನು ಪುನರಾಭಿವೃದ್ಧಿಗೊಳಿಸುವ ಪ್ರಸ್ತಾವವು ಸಮರ್ಥನೀಯವಲ್ಲ. ಇತರ ಸಾರ್ವಜನಿಕ ಪ್ರಾಧಿಕಾರಗಳೂ ಆದಾಯ ಗಳಿಕೆಗಾಗಿ ಇಂತಹುದೇ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಹೇಳಿರುವ ಪತ್ರವು, ಇಂತಹ ಪುನರಾಭಿವೃದ್ಧಿಯಿಂದ ಯಾರಿಗೆ ಲಾಭ ಮತ್ತು ಇದಕ್ಕಾಗಿ ತೆರಬೇಕಾದ ಸಾಮಾಜಿಕ ಮತ್ತು ಪರಿಸರ ವೆಚ್ಚವೆಷ್ಟು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದೆ.