ಮಹಾರಾಷ್ಟ್ರ : ಕಾಂಗ್ರೆಸ್ ಸಂಸದ ವಸಂತ್ ಚವ್ಹಾಣ್ ನಿಧನ
ವಸಂತ್ ಚವ್ಹಾಣ್ | ANI
ನಾಂದೇಡ್ : ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದ ಕಾಂಗ್ರೆಸ್ ಸಂಸದ ವಸಂತ್ ಚವ್ಹಾಣ್ (69) ಅಲ್ಪ ಕಾಲದ ಅಸೌಖ್ಯದ ಬಳಿಕ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮಂಜಾನೆ ನಿಧನರಾಗಿದ್ದಾರೆ.
ಮೂತ್ರ ಪಿಂಡದ ಖಾಯಿಲೆಯ ಹಿನ್ನೆಲೆಯಲ್ಲಿ ಅವರು ಕಳೆದ ಒಂದು ವಾರದಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಚವ್ಹಾಣ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಮರಾಠವಾಡಾ ವಲಯದ ನಾಂದೇಡ್ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಿಜೆಪಿಯ ಪ್ರಭಾವಿ ಹಾಗೂ ಸಂಸದ ಪ್ರತಾಪ್ ಪಾಟಿಲ್ ಚಿಖಿಲ್ಕರ್ ಅವರನ್ನು ಸೋಲಿಸಿ 2024ರಲ್ಲಿ ಮೊದಲ ಬಾರಿಗೆ ಲೋಕಸಭೆ ಸದಸ್ಯರಾಗಿದ್ದರು.
ಚುನಾವಣೆಗೆ ಮುನ್ನ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಸೇರಿದಂತೆ ಹಲವರು ಪಕ್ಷ ತ್ಯಜಿಸಿದ ಬಳಿಕವೂ ಹಾಗೂ ತನ್ನ ಅನಾರೋಗ್ಯದ ಹೊರತಾಗಿಯೂ ಚವ್ಹಾಣ್ ಈ ಚುನಾವಣೆಯಲ್ಲಿ ಗೆಲುವು ಗಳಿಸಿದ್ದರು.
ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಮೊದಲಾದವರು ಚವ್ಹಾಣ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.