×
Ad

ಯುವಕನ ಥಳಿಸಿ ಹತ್ಯೆ ಪ್ರಕರಣ: ಮಹಾರಾಷ್ಟ್ರ ಸರಕಾರ, ಡಿಜಿಪಿಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

Update: 2025-08-23 16:48 IST

PC : X 

ಹೊಸದಿಲ್ಲಿ: ಜಳಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗುಂಪಿನಿಂದ ಥಳಿತದಿಂದ 21ರ ಹರೆಯದ ಯುವಕನೋರ್ವ ಸಾವನ್ನಪ್ಪಿರುವ ವರದಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಮಹಾರಾಷ್ಟ್ರ ಸರಕಾರ ಮತ್ತು ರಾಜ್ಯದ ಪೋಲಿಸ್ ಮುಖ್ಯಸ್ಥರಿಗೆ ನೋಟಿಸ್‌ಗಳನ್ನು ಹೊರಡಿಸಿದ್ದು,ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ಆ.11ರಂದು ಘಟನೆ ನಡೆದಿದೆ. ಯುವಕ ಬೇರೆ ಸಮುದಾಯದ ಯುವತಿಯೊಂದಿಗೆ ಕೆಫೆಯೊಂದರಲ್ಲಿ ಕುಳಿತಿದ್ದಾಗ 8-10 ಜನರ ಗುಂಪು ಆತನನ್ನು ಪ್ರಶ್ನಿಸಿತ್ತು ಮತ್ತು ಆತನ ಮೊಬೈಲ್ ಫೋನ್‌ನಲ್ಲಿ ಫೋಟೊವೊಂದನ್ನು ನೋಡಿ ಆತನ ಮೇಲೆ ಹಲ್ಲೆಯನ್ನು ಆರಂಭಿಸಿತ್ತು. ಯುವಕನನ್ನು ಆತನ ಗ್ರಾಮಕ್ಕೆ ಎಳೆದೊಯ್ದ ದುಷ್ಕರ್ಮಿಗಳು ಅಲ್ಲಿನ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದು, ಮಾರ್ಗದುದ್ದಕ್ಕೂ ಆತನನ್ನು ಥಳಿಸುತ್ತಲೇ ಇದ್ದರು. ನಂತರ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಆತನ ಮನೆಯ ಬಳಿ ಬಿಟ್ಟು ಹೋಗಿದ್ದರು. ಯುವಕನನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆಯೇ ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ ಎಂದು NHRC ಹೇಳಿಕೆಯಲ್ಲಿ ತಿಳಿಸಿದೆ.

ಮಾಧ್ಯಮ ವರದಿಯನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿರುವ NHRC,ವರದಿಯಲ್ಲಿನ ವಿಷಯವು ನಿಜವಾಗಿದ್ದರೆ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News