×
Ad

ಬಕ್ರೀದ್ ಸಮಯದಲ್ಲಿ ಜಾನುವಾರು ಮಾರುಕಟ್ಟೆಗಳನ್ನು ಮುಚ್ಚಲು ಮಹಾರಾಷ್ಟ್ರ ಗೋಸೇವಾ ಆಯೋಗ ಆದೇಶ

Update: 2025-06-01 17:57 IST

ಸಾಂದರ್ಭಿಕ ಚಿತ್ರ (PTI)

ಮುಂಬೈ: ಜಾನುವಾರುಗಳ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿರುವ ಮಹಾರಾಷ್ಟ್ರ ಗೋಸೇವಾ ಆಯೋಗ(ಎಂಜಿಎಸ್)ವು ಬಕ್ರೀದ್‌ಗೆ ಮುನ್ನ ಜೂ.1 ಮತ್ತು ಜೂ.8ರ ನಡುವೆ ಕಾರ್ಯ ನಿರ್ವಹಿಸದಂತೆ ರಾಜ್ಯದಲ್ಲಿಯ ಜಾನುವಾರು ಮಾರುಕಟ್ಟೆಗಳಿಗೆ ಆದೇಶಿಸಿದೆ ಎಂದು ಸುದ್ದಿಸಂಸ್ಥೆಯು ರವಿವಾರ ವರದಿ ಮಾಡಿದೆ. ಬಕ್ರೀದ್‌ ಅನ್ನು ಜೂ.7ರಂದು ಆಚರಿಸಲಾಗುತ್ತಿದ್ದು, ತ್ಯಾಗದ ಸಂಕೇತವಾಗಿರುವ ಈ ಹಬ್ಬವು ಆಡುಗಳ ವಧೆಯನ್ನು ಒಳಗೊಂಡಿದೆ.

ಎಂಜಿಎಸ್ ಮೇ 27ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಅಕ್ರಮ ಗೋಹತ್ಯೆ ನಡೆಯದಂತೆ ನೋಡಿಕೊಳ್ಳಲು ಯಾವುದೇ ಜಿಲ್ಲೆಯಲ್ಲಿ ಜಾನುವಾರು ಮಾರುಕಟ್ಟೆಗಳು ಕಾರ್ಯ ನಿರ್ವಹಿಸುವಂತಿಲ್ಲ ಎಂದು ತಿಳಿಸಿದೆ.

ಈ ವಿಷಯದಲ್ಲಿ ಕಟ್ಟೆಚ್ಚರ ವಹಿಸುವಂತೆ ಎಪಿಎಂಸಿಗಳಿಗೆ ಸೂಚಿಸಿರುವ ಸುತ್ತೋಲೆಯು ಗೋಹತ್ಯೆಯನ್ನು ನಿಷೇಧಿಸಿರುವ ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆಯನ್ನೂ ಉಲ್ಲೇಖಿಸಿದೆ.

ಗೋಹತ್ಯೆಯ ಸಾಧ್ಯತೆಯನ್ನು ತಗ್ಗಿಸುವುದು ಸುತ್ತೋಲೆಯ ಉದ್ದೇಶವಾಗಿದೆ ಎಂದು ಎಂಎಸ್‌ಜಿ ಅಧ್ಯಕ್ಷ ಶೇಖರ ಮುಂದಡಾ ಹೇಳಿದರು.

ಸುತ್ತೋಲೆಯು ವಿವಾದವನ್ನು ಸೃಷ್ಟಿಸಿದ್ದು, ಬಕ್ರೀದ್‌ಗೆ ಒಂದು ವಾರ ಮೊದಲು ಕುರಿಮರಿಗಳು ಮತ್ತು ಕುರಿಗಳು ಸೇರಿದಂತೆ ಎಲ್ಲ ಪ್ರಾಣಿಗಳ ಮಾರಾಟವನ್ನು ನಿಲ್ಲಿಸುವುದರ ಹಿಂದಿನ ಉದ್ದೇಶವನ್ನು ಹಲವರು ಪ್ರಶ್ನಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಹುಜನ ವಂಚಿತ ಅಘಾಡಿಯ ರಾಜ್ಯ ಉಪಾಧ್ಯಕ್ಷ ಫಾರೂಕ್ ಅಹ್ಮದ್ ಅವರು, ಗೋಹತ್ಯೆ ನಡೆಯದಂತೆ ನೋಡಿಕೊಳ್ಳಲು ಸರಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕು, ಆದರೆ ಇಡೀ ಮಾರುಕಟ್ಟೆಯನ್ನು ಮುಚ್ಚುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.

ಮಾರುಕಟ್ಟೆಗಳು ಕಾರ್ಯ ನಿರ್ವಹಿಸದಿದ್ದರೆ ಆಡು,ಎಮ್ಮೆ ಮತ್ತು ಕುರಿಗಳಂತಹ ನಿಷೇಧಿತವಲ್ಲದ ಜಾನುವಾರುಗಳ ವ್ಯಾಪಾರವು ಸ್ಥಗಿತಗೊಳ್ಳುತ್ತದೆ. ಪರಿಣಾಮವಾಗಿ ರೈತರು,ಹಮಾಲಿಗಳು, ದಲ್ಲಾಳಿಗಳು,ವಾಹನ ಚಾಲಕರು,ಕುರೇಶಿ-ಖಾಟಿಕ್ ಸಮುದಾಯ ಮತ್ತು ಕಾರ್ಮಿಕರು ತಮ್ಮ ದೈನಂದಿನ ಆದಾಯವನ್ನು ಕಳೆದುಕೊಳ್ಳುತ್ತಾರೆ. ಎಂಎಸ್‌ಜಿಯು ಕೇವಲ ಶಿಫಾರಸುಗಳನ್ನು ಮಾಡುವ ಅಧಿಕಾರವನ್ನು ಹೊಂದಿದೆ. ಅದು ಎಪಿಎಂಸಿಗಳಿಗೆ ನೇರವಾಗಿ ಆದೇಶವನ್ನು ಹೊರಡಿಸುವುದು ಅದರ ಅಧಿಕಾರವ್ಯಾಪ್ತಿಯನ್ನು ಮೀರಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News