Maharashtra ಸ್ಥಳೀಯ ಸಂಸ್ಥೆ ಚುನಾವಣೆ| ಅಂಬರ್ನಾಥ್ ಪುರಸಭೆಯಲ್ಲಿ ಶಿವಸೇನೆಯನ್ನು ಹೊರಗಿಡಲು ಬಿಜೆಪಿ ಕೈ ಹಿಡಿದ ಕಾಂಗ್ರೆಸ್
Pc: timesofindia.indiatimes
ಥಾಣೆ: ಅಂಬರ್ನಾಥ್ ಪುರಸಭೆಯ ನಿಯಂತ್ರಣಕ್ಕಾಗಿ ನಡೆದ ರಾಜಕೀಯ ಬೆಳವಣಿಗೆ ಮಂಗಳವಾರ ಅಚ್ಚರಿಯ ತಿರುವು ಪಡೆದುಕೊಂಡಿದೆ. ಮಹಾಯುತಿ ಪಾಲುದಾರರಾದ ಬಿಜೆಪಿ ಮತ್ತು ಶಿವಸೇನೆ ನಡುವಿನ ಪೈಪೋಟಿಯ ನಡುವೆ, ಪರಸ್ಪರ ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅಪರೂಪದ ಮೈತ್ರಿಗೆ ಕೈಜೋಡಿಸಿ ಶಿವಸೇನೆಯನ್ನು ಅಧಿಕಾರದಿಂದ ಹೊರಗಿಡಲು ಮುಂದಾಗಿವೆ.
ಡಿಸೆಂಬರ್ 20ರಂದು ನಡೆದ ಪುರಸಭೆ ಚುನಾವಣೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 60 ಸದಸ್ಯರ ಮಂಡಳಿಯಲ್ಲಿ 27 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತಕ್ಕೆ ನಾಲ್ಕು ಸ್ಥಾನಗಳ ಕೊರತೆಯಿತ್ತು. ಬಿಜೆಪಿ 14 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 12 ಸ್ಥಾನಗಳನ್ನು ಗಳಿಸಿತು. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದು, ಇಬ್ಬರು ಸ್ವತಂತ್ರ ಅಭ್ಯರ್ಥಿಗಳೂ ಆಯ್ಕೆಯಾಗಿದ್ದರು.
ಈ ನಡುವೆ ನಡೆದ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಶಿವಸೇನೆಗೆ ಹಿನ್ನಡೆಯಾಗಿದ್ದು, ಅದರ ಅಭ್ಯರ್ಥಿ ಮನೀಶಾ ವಾಲೇಕರ್ ಬಿಜೆಪಿಯ ತೇಜಶ್ರೀ ಕಾರಂಜುಲೆ ಪಾಟೀಲ್ ಎದುರು ಸೋಲು ಕಂಡರು. ಇದರ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಅಜಿತ್ ಪವಾರ್ ಬಣದ ಎನ್‌ಸಿಪಿ ಸೇರಿಕೊಂಡು ‘ಅಂಬರ್ನಾಥ್ ವಿಕಾಸ್ ಅಘಾಡಿ’ ಎಂಬ ಹೊಸ ಮೈತ್ರಿಕೂಟವನ್ನು ರಚಿಸಿವೆ.
ಈ ಅಘಾಡಿಯಲ್ಲಿ 14 ಬಿಜೆಪಿ ಸದಸ್ಯರು, 12 ಕಾಂಗ್ರೆಸ್ ಕೌನ್ಸಿಲರ್‌ಗಳು, ಎನ್‌ಸಿಪಿ (ಅಜಿತ್ ಪವಾರ್ ಬಣ)ದ ನಾಲ್ವರು ಹಾಗೂ ಒಬ್ಬ ಸ್ವತಂತ್ರ ಸದಸ್ಯ ಸೇರಿದ್ದು, ಒಟ್ಟು 32 ಸದಸ್ಯರ ಬೆಂಬಲ ದೊರೆತಿದೆ. ಇದರಿಂದ 60 ಸದಸ್ಯರ ಪುರಸಭೆಯಲ್ಲಿ ಬಹುಮತದ ಗಡಿ ದಾಟಲಾಗಿದೆ. ಬಿಜೆಪಿ ಕಾರ್ಪೊರೇಟರ್ ಅಭಿಜಿತ್ ಕಾರಂಜುಲೆ ಪಾಟೀಲ್ ಅವರನ್ನು ಅಘಾಡಿಯ ಗುಂಪು ನಾಯಕರಾಗಿ ನೇಮಿಸಲಾಗಿದೆ.
ಅಭಿಜಿತ್ ಪಾಟೀಲ್ ಮಾತನಾಡಿ, ಶಿವಸೇನೆಯ ದೀರ್ಘ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಬೆದರಿಕೆಯ ಸಂಸ್ಕೃತಿ ಬೆಳೆದಿದೆ. ಅದರಿಂದ ಪುರಸಭೆಯನ್ನು ಮುಕ್ತಗೊಳಿಸಿ ಅಂಬರ್ನಾಥ್ ನಲ್ಲಿ ಅಭಿವೃದ್ಧಿಗೆ ಒತ್ತು ನೀಡುವುದು ನಮ್ಮ ಉದ್ದೇಶ ಎಂದು ಹೇಳಿದರು. ಈ ಗುರಿಯನ್ನೇ ಗಮನದಲ್ಲಿಟ್ಟುಕೊಂಡು ಮೈತ್ರಿ ರೂಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಅಧ್ಯಕ್ಷ ಸ್ಥಾನವನ್ನು ವಶಪಡಿಸಿಕೊಂಡಿದ್ದರೂ, ಪುರಸಭೆಯನ್ನು ಸ್ವತಂತ್ರವಾಗಿ ನಡೆಸಲು ಅಗತ್ಯ ಸಂಖ್ಯಾಬಲ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಅದರ ಫಲವಾಗಿ ಅಘಾಡಿ ರಚನೆಯಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಈ ರಾಜಕೀಯ ಬೆಳವಣಿಗೆಯನ್ನು ಶಿವಸೇನೆ ತೀವ್ರವಾಗಿ ಟೀಕಿಸಿದೆ. ಅಂಬರ್ನಾಥ್ ಕ್ಷೇತ್ರದ ಶಿವಸೇನಾ ಶಾಸಕ ಬಾಲಾಜಿ ಕಿನಿಕರ್, “ಕೇಂದ್ರದಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ’ದ ಮಾತಾಡುವ ಬಿಜೆಪಿ, ಸ್ಥಳೀಯ ಮಟ್ಟದಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಇದು ಅನೈತಿಕ ಹಾಗೂ ಅವಕಾಶವಾದಿ ರಾಜಕಾರಣ” ಎಂದು ಆರೋಪಿಸಿದ್ದಾರೆ.
ಇತ್ತ ಕಾಂಗ್ರೆಸ್ ರಾಜ್ಯ ನಾಯಕತ್ವ, “ಇಲ್ಲಿಯವರೆಗೆ ಯಾವುದೇ ಔಪಚಾರಿಕ ನಿರ್ಧಾರ ಅಥವಾ ಪ್ರಸ್ತಾಪ ಬಂದಿಲ್ಲ” ಎಂದು ಹೇಳಿದೆ. ಅಂಬರ್ನಾಥ್ ನ ಕಾಂಗ್ರೆಸ್ ವಕ್ತಾರರು, ಬಿಜೆಪಿ ಅಥವಾ ಶಿಂಧೆ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅಥವಾ ಮತದಾನದಿಂದ ದೂರ ಉಳಿಯುವುದು ಸೇರಿದಂತೆ ಹಲವು ಆಯ್ಕೆಗಳು ನಮ್ಮ ಮುಂದೆ ಇದ್ದವು ಎಂದು ತಿಳಿಸಿದ್ದಾರೆ.
ಈ ಬೆಳವಣಿಗೆ, ಮುಂಬೈ–ಥಾಣೆಯಂತಹ ಮಹಾನಗರ ಪ್ರದೇಶಗಳಲ್ಲಿ ಸ್ಥಳೀಯ ರಾಜಕಾರಣವು ರಾಜ್ಯ ಮಟ್ಟದ ಮೈತ್ರಿ ಸಮೀಕರಣಗಳಿಗೆ ಭಿನ್ನವಾಗಿ ಸಾಗುತ್ತಿರುವುದನ್ನು ಸ್ಪಷ್ಟಪಡಿಸಿದೆ.