ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ| ಶಿಂಧೆ ಭದ್ರಕೋಟೆಯಲ್ಲಿ ಬಿರುಕು: ಉದ್ಧವ್ ನೇತೃತ್ವದ ಶಿವಸೇನೆಗೆ ಗೆಲುವು
ಏಕನಾಥ್ ಶಿಂಧೆ | Photo Credit : PTI
ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗಮನ ಸೆಳೆದ ಫಲಿತಾಂಶವೊಂದರಲ್ಲಿ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ವಾಸವಿರುವ ಥಾಣೆ ನಗರದ ವಾರ್ಡ್ ಅನ್ನು ಶಿವಸೇನೆ (ಯುಬಿಟಿ) ತನ್ನದಾಗಿಸಿಕೊಂಡಿದೆ. ಈ ಪ್ರದೇಶವನ್ನು ಶಿಂಧೆ ಅವರ ರಾಜಕೀಯ ಭದ್ರಕೋಟೆಯೆಂದು ಪರಿಗಣಿಸಲಾಗುತ್ತಿತ್ತು.
ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ನ ವಾರ್ಡ್ 13ರಲ್ಲಿ ನಡೆದ ಸ್ಪರ್ಧೆಯಲ್ಲಿ, ಶಿವಸೇನೆ (ಯುಬಿಟಿ) ಅಭ್ಯರ್ಥಿ ಶಹಾಜಿ ಖುಸ್ಫೆ 12,860 ಮತಗಳನ್ನು ಪಡೆದು, ಶಿಂಧೆ ನೇತೃತ್ವದ ಶಿವಸೇನೆಯ ಅಭ್ಯರ್ಥಿ ಹಾಗೂ ಮಾಜಿ ಮೇಯರ್ ಅಶೋಕ್ ವೈಟಿ ಅವರನ್ನು 667 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ವೈಟಿ 12,193 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಥಾಣೆ ನಗರವು ಶಿವಸೇನೆಯ ಸಾಂಪ್ರದಾಯಿಕ ಬಲ ಕೇಂದ್ರವಾಗಿದ್ದು, ಬಾಳ್ ಠಾಕ್ರೆ ಹಾಗೂ ದಿವಂಗತ ಆನಂದ್ ದಿಘೆ ಅವರ ರಾಜಕೀಯ ಪರಂಪರೆಯೊಂದಿಗೆ ಗುರುತಿಸಿಕೊಂಡಿದೆ. 2022ರಲ್ಲಿ ಪಕ್ಷದಲ್ಲಿ ನಡೆದ ವಿಭಜನೆಯ ಬಳಿಕ, ಥಾಣೆಯಲ್ಲಿನ ಹೆಚ್ಚಿನ ವಾರ್ಡ್ ಗಳು ಮತ್ತು ಕಾರ್ಪೊರೇಟರ್ ಗಳು ಶಿಂಧೆ ಬಣಕ್ಕೆ ಸೇರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಫಲಿತಾಂಶವು ಮಹತ್ವ ಪಡೆದುಕೊಂಡಿದೆ.