ಚಾಕಲೇಟ್ ಖರೀದಿಸಲು ಹಣ ಕೇಳಿದ್ದಕ್ಕೆ ಪುತ್ರಿಯನ್ನು ಹತ್ಯೆಗೈದ ತಂದೆ!
ಸಾಂದರ್ಭಿಕ ಚಿತ್ರ (credit: Grok)
ಮುಂಬೈ: ಚಾಕಲೇಟ್ ಖರೀದಿಸಲು ಹಣ ಕೇಳಿದ ತನ್ನ ನಾಲ್ಕು ವರ್ಷದ ಪುತ್ರಿಯನ್ನೇ ತಂದೆಯೊಬ್ಬ ಕತ್ತು ಹಿಸುಕಿ ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಬಾಲಾಜಿ ರಾಥೋಡ್ ಎಂದು ಗುರುತಿಸಲಾಗಿದ್ದು, ಆತ ಮದ್ಯವ್ಯಸನಿಯಾಗಿದ್ದ. ಇದರಿಂದಾಗಿ ಆಗಾಗ ಕೌಟುಂಬಿಕ ಕಲಹಗಳು ನಡೆಯುತ್ತಿದ್ದುದರಿಂದ, ಆತನ ಪತ್ನಿ ಆತನನ್ನು ತೊರೆದು, ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ತನ್ನ ತಂದೆಯೊಂದಿಗಿದ್ದ ಅರುಷಿ, ತನಗೆ ಚಾಕಲೇಟ್ ಬೇಕೆಂದು ಆತನನ್ನು ಕೇಳಿದ್ದಾಳೆ. ಇದರಿಂದ ಕುಪಿತಗೊಂಡ ಆತ, ಆಕೆಯ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ ಆರೋಪಿ ಬಾಲಾಜಿ ರಾಥೋಡ್ ನ ಪತ್ನಿ, ನನ್ನ ಪತಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ದೂರನ್ನು ಆಧರಿಸಿ, ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.