ಮೇಘಾಲಯದ ವಿಜ್ಞಾನ, ತಂತ್ರಜ್ಞಾನ ವಿವಿ ಕುಲಪತಿ ಮಹಬೂಬುಲ್ ಹಕ್ ಬಂಧನ
ಮಹಬೂಬುಲ್ ಹಕ್ (Photo | Facebook)
ಹೊಸದಿಲ್ಲಿ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮೇಘಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (USTM) ವಿರುದ್ಧ ವಂಚನೆ ಆರೋಪಿಸಿದ ಬೆನ್ನಲ್ಲೇ ವಿವಿಯ ಕುಲಪತಿ ಮಹಬೂಬುಲ್ ಹಕ್ ಅವರನ್ನು ಅಸ್ಸಾಂ ಪೊಲೀಸರು ಗುವಾಹಟಿಯ ಅವರ ನಿವಾಸದಿಂದ ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಪನ್ ಬಝಾರ್ ಪೊಲೀಸರು ಮತ್ತು ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆ(ಎಸ್ಟಿಎಫ್) ಮಹಬೂಬುಲ್ ಹಕ್ ಅವರನ್ನು ಬಂಧಿಸಿದೆ.
ಹಕ್ ಮತ್ತು USTM ಮೇಲೆ ಇತ್ತೀಚೆಗೆ ವಾಗ್ಧಾಳಿ ನಡೆಸಿದ್ದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ವಂಚನೆ ಮತ್ತು ವಿದ್ಯಾರ್ಥಿಗಳಿಗೆ ನಕಲಿ ಪ್ರಮಾಣಪತ್ರಗಳು ಮತ್ತು ಪದವಿಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದರು. ಆದರೆ ವಿಶ್ವವಿದ್ಯಾಲಯವು ಈ ಆರೋಪವನ್ನು ನಿರಾಕರಿಸಿತ್ತು.
ಕಳೆದ ವರ್ಷ ಆಗಸ್ಟ್‌ನಲ್ಲಿ, 'ಪ್ರವಾಹ ಜಿಹಾದ್' ಎಂಬ ಪದವನ್ನು ಬಳಕೆ ಮಾಡಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಮೇಘಾಲಯದ ರಿ-ಭೋಯ್ ಜಿಲ್ಲೆಯಲ್ಲಿ USTM ಕ್ಯಾಂಪಸ್ ನಿರ್ಮಾಣ ಕಾಮಗಾರಿ ವೇಳೆ ಅರಣ್ಯನಾಶದಿಂದ ಪ್ರವಾಹ ಉದ್ಭವಿಸಿದೆ ಎಂದು ಆರೋಪಿಸಿದ್ದರು. USTM ತನ್ನ ಕ್ಯಾಂಪಸ್‌ಲ್ಲಿರುವ ಬೆಟ್ಟಗಳನ್ನು ಕೆಡವಿ ʼಪ್ರವಾಹ ಜಿಹಾದ್ʼ ನಲ್ಲಿ ತೊಡಗಿದೆ ಶರ್ಮಾ ಆರೋಪಿಸಿದ್ದರು.