×
Ad

ಅಲ್-ಫಲಾಹ್ ವಿಶ್ವವಿದ್ಯಾಲಯದ ಮುಖ್ಯಸ್ಥರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ED: 139 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

Update: 2026-01-16 20:37 IST

Photo Credit ; PTI 

ಹೊಸದಿಲ್ಲಿ: ಫರಿದಾಬಾದ್‌ ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಮುಖ್ಯಸ್ಥ ಜವಾದ್ ಅಹ್ಮದ್ ಸಿದ್ದಿಕಿ ಹಾಗೂ ಅವರ ಕುಟುಂಬದ ನಿಯಂತ್ರಣದಲ್ಲಿರುವ ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್ ವಿರುದ್ಧ ಜಾರಿ ನಿರ್ದೇಶನಾಲಯ (ED) ಹಣ ವರ್ಗಾವಣೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದೆ. ದಿಲ್ಲಿಯ ಕೆಂಪು ಕೋಟೆ ಬಳಿ ಕಳೆದ ವರ್ಷ ನ.10ರಂದು ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಹಣಕಾಸು ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯದ ಕ್ಯಾಂಪಸ್‌ ನೊಳಗಿನ 54 ಎಕರೆ ಭೂಮಿ ಸೇರಿದಂತೆ ಒಟ್ಟು 139 ಕೋಟಿ ರೂ. ಮೌಲ್ಯದ ಆಸ್ತಿಯನ್ನು ED ಮುಟ್ಟುಗೋಲು ಹಾಕಿಕೊಂಡಿದೆ. ಶುಕ್ರವಾರ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಸಿದ್ದಿಕಿ ಹಾಗೂ ಅವರ ಕುಟುಂಬ ಸದಸ್ಯರು ವಿಶ್ವವಿದ್ಯಾಲಯದ ಕಾರ್ಯಾಚರಣೆಯಲ್ಲಿ ಆರ್ಥಿಕ ಅಕ್ರಮಗಳಲ್ಲಿ ತೊಡಗಿದ್ದ ಕುರಿತು ಸಾಕಷ್ಟು ಪುರಾವೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ED ನಡೆಸಿದ ತನಿಖೆಯ ಪ್ರಕಾರ, ಸಿದ್ದಿಕಿ ಕುಟುಂಬದ ನಿಯಂತ್ರಣದಲ್ಲಿರುವ ಸಂಸ್ಥೆಗಳು ವಿಶ್ವವಿದ್ಯಾಲಯದ ಹಾಸ್ಟೆಲ್ ಅಡುಗೆ ಹಾಗೂ ವಿಶ್ವವಿದ್ಯಾಲಯ–ಆಸ್ಪತ್ರೆ ಸಂಕೀರ್ಣದ ನಿರ್ಮಾಣ ಕಾಮಗಾರಿಗಳ ಒಪ್ಪಂದಗಳನ್ನು ಪಡೆದಿದ್ದವು. ಅಲ್ಲದೆ, ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್ ವಿಶ್ವವಿದ್ಯಾಲಯದ ನಿಧಿಗಳನ್ನು ಬಳಸಿಕೊಂಡು ಭೂಸ್ವಾಧೀನ ಮಾಡಿಕೊಂಡಿರುವುದೂ ಪತ್ತೆಯಾಗಿದೆ.

ವಿಶ್ವವಿದ್ಯಾಲಯವು ತನ್ನ ಮಾನ್ಯತೆ ಕುರಿತು ಮೋಸದ ಹಾಗೂ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ವಂಚಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ನವೆಂಬರ್ 18ರಂದು ಸಿದ್ದಿಕಿಯನ್ನು ಈಡಿ ಬಂಧಿಸಿತ್ತು. ಸುಳ್ಳು ಮಾನ್ಯತೆ ಹಕ್ಕುಗಳ ಮೂಲಕ ವಿಶ್ವವಿದ್ಯಾಲಯ ಮತ್ತು ಅದರ ನಿಯಂತ್ರಣ ಟ್ರಸ್ಟ್ ಕನಿಷ್ಠ 415.10 ಕೋಟಿ ಮೌಲ್ಯದ ಅಪರಾಧದ ಆದಾಯವನ್ನು ಗಳಿಸಿವೆ ಎಂದು ಈಡಿ ನ್ಯಾಯಾಲಯಕ್ಕೆ ತಿಳಿಸಿತ್ತು.

ಈ ಪ್ರಕರಣವು ವೈಟ್-ಕಾಲರ್ ಭಯೋತ್ಪಾದನಾ ಜಾಲಕ್ಕೆ ಸಂಬಂಧಿಸಿದ ವಿಶಾಲ ತನಿಖೆಯ ಭಾಗವಾಗಿದ್ದು, ಇದುವರೆಗೆ ಮೂವರು ವೈದ್ಯರು ಸೇರಿದಂತೆ ಎರಡು ಡಜನ್‌ಗೂ ಹೆಚ್ಚು ಮಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಜಮ್ಮು–ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ನ.10ರಂದು ಅಲ್-ಫಲಾಹ್ ವೈದ್ಯಕೀಯ ಕಾಲೇಜಿನ ವೈದ್ಯ ಉಮರ್-ಉನ್-ನಬಿ, ಕೆಂಪು ಕೋಟೆಯ ಹೊರಭಾಗದಲ್ಲಿ ಆತ್ಮಹತ್ಯಾ ಕಾರು ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದರು. ಈ ಸ್ಫೋಟದ ಭಯೋತ್ಪಾದನಾ ಆಯಾಮವನ್ನು ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ.

ED ಮಾಹಿತಿ ಪ್ರಕಾರ, ಸಿದ್ದಿಕಿಯ ಪುತ್ರ ಅಫ್ಹಾಮ್ ಅಹ್ಮದ್ ಮತ್ತು ಪುತ್ರಿ ಅಫಿಯಾ ಸಿದ್ದಿಕಾ ಬ್ರಿಟಿಷ್ ಪ್ರಜೆಗಳಾಗಿರುವುದನ್ನು ಸೂಚಿಸುವ ಕೆಲವು ವಿದೇಶಿ ದಾಖಲೆಗಳು ಪತ್ತೆಯಾಗಿದ್ದು, ಅವರ ಪೌರತ್ವ ಸ್ಥಿತಿಯ ಪರಿಶೀಲನೆ ಮುಂದುವರಿದಿದೆ.

ಫರಿದಾಬಾದ್‌ನ ಧೌಜ್ ಪ್ರದೇಶದಲ್ಲಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಂಕೀರ್ಣದ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ವಹಿವಾಟುಗಳಲ್ಲಿ ಸಂಬಂಧಿತ-ಪಕ್ಷ ನಿಧಿಗಳ ತಿರುವು ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕಾಮಗಾರಿಗಳನ್ನು ಸಿದ್ದಿಕಿಯ ಇಬ್ಬರು ಮಕ್ಕಳು ತಲಾ 49% ಪಾಲು ಹೊಂದಿರುವ ಹಾಗೂ ಉಳಿದ 2% ಪಾಲು ಒಬ್ಬ ಉದ್ಯೋಗಿಯದ್ದಾಗಿರುವ ಪಾಲುದಾರಿಕೆ ಸಂಸ್ಥೆ ನಿರ್ವಹಿಸುತ್ತಿದೆ ಎಂದು ಈಡಿ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News