UMEED ವಕ್ಫ್ ಪೋರ್ಟಲ್‌ನಲ್ಲಿ ದೋಷಗಳಿವೆ ಎಂದು ಆರೋಪಿಸಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಸಂಬಂಧಿತ ಪ್ರಾಧಿಕಾರಗಳನ್ನು ಸಂಪರ್ಕಿಸಲು ಮುಕ್ತ ಅವಕಾಶ ನೀಡಿದ ನ್ಯಾಯಾಲಯ
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ: ವಕ್ಫ್ ಆಸ್ತಿಗಳ ವಿವರಗಳನ್ನು ಅಪ್‌ಲೋಡ್ ಮಾಡಲು ಕೇಂದ್ರ ಸರ್ಕಾರ ರೂಪಿಸಿರುವ UMEED ಪೋರ್ಟಲ್ ನಲ್ಲಿ ತಾಂತ್ರಿಕ ಹಾಗೂ ರಚನಾತ್ಮಕ ಸಮಸ್ಯೆಗಳಿವೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಶುಕ್ರವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪ್ರಶ್ನೆ ಎತ್ತಲಾಗಿರುವ ಸಮಸ್ಯೆಗಳು ದೊಡ್ಡ ಮಟ್ಟದಲ್ಲಿ ಆಡಳಿತಾತ್ಮಕ ಸ್ವರೂಪ ಹೊಂದಿವೆ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ. ಜೋಯ್ ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತು.
ಆದರೆ, ವಕ್ಫ್ ಮಂಡಳಿಯ ಹಂಗಾಮಿ ಮುತಾವಲಿಯಾದ ಅರ್ಜಿದಾರ ಹಶ್ಮತ್ ಅಲಿ ಅವರಿಗೆ ತಮ್ಮ ಕುಂದುಕೊರತೆಗಳ ಕುರಿತು ದೂರು ಸಲ್ಲಿಸಲು ಸೂಕ್ತ ಪ್ರಾಧಿಕಾರಗಳನ್ನು ಸಂಪರ್ಕಿಸಲು ನ್ಯಾಯಪೀಠ ಮುಕ್ತ ಅವಕಾಶ ನೀಡಿತು.
“ಈ ರಿಟ್ ಅರ್ಜಿಯನ್ನು ಪರಿಗಣಿಸಲು ನಮಗೆ ಯಾವುದೇ ಆಧಾರ ಕಾಣಿಸುತ್ತಿಲ್ಲ. ಅರ್ಜಿದಾರರು ಸ್ಪಷ್ಟೀಕರಣಕ್ಕಾಗಿ ಅಥವಾ ತಮ್ಮ ಕುಂದುಕೊರತೆಯನ್ನು ಬಗೆಹರಿಸಿಕೊಳ್ಳಲು ಸಂಬಂಧಿತ ಪ್ರಾಧಿಕಾರವನ್ನು ಸಂಪರ್ಕಿಸಲು ಮುಕ್ತ ಅವಕಾಶವನ್ನು ಮಂಜೂರು ಮಾಡಲಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ಮುತಾವಲಿಯಾದ ಅರ್ಜಿದಾರ ಹಶ್ಮತ್ ಅಲಿ, ಒಗ್ಗೂಡಿಸಿದ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ, 1995ರ ಸೆಕ್ಷನ್ 3ಬಿ ಅಡಿ ಡಿಜಿಟಲ್ ಅಪ್ ಲೋಡ್ ಅನ್ನು ಕಡ್ಡಾಯವಾಗಿ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
UMEED ನಿಯಮಗಳು, 2025ರ ಅಡಿ ಅಧಿಸೂಚನೆಯಾದ ಉಮೀದ್ ಪೋರ್ಟಲ್ ರಚನಾತ್ಮಕವಾಗಿ ದೋಷಪೂರಿತವಾಗಿದ್ದು, ವಕ್ಫ್ ಆಸ್ತಿಗಳನ್ನು ತಾಂತ್ರಿಕವಾಗಿ ನೋಂದಾಯಿಸಲು ಅನರ್ಹವಾಗಿದೆ ಎಂದು ಅರ್ಜಿದಾರ ಹಶ್ಮತ್ ಅಲಿ ವಾದಿಸಿದ್ದರು.