×
Ad

ಜಾರ್ಖಂಡ್| ಈಡಿ ಕಚೇರಿ ಮೇಲೆ ಪೊಲೀಸ್ ದಾಳಿ ಪ್ರಕರಣ: ತನಿಖೆಗೆ ಹೈಕೋರ್ಟ್ ತಡೆ

Update: 2026-01-16 22:00 IST

Photo Credit : PTI 

ರಾಂಚಿ, ಜ. 16: ಗುರುವಾರ ಜಾರ್ಖಂಡ್ ಪೊಲೀಸರು ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯ (ಈಡಿ)ದ ವಲಯ ಕಚೇರಿಗೆ ದಾಳಿ ನಡೆಸಿ ದಾಳಿಯ ಬಿಸಿಯನ್ನು ಅದಕ್ಕೂ ಮುಟ್ಟಿಸಿದರು. ಹಲ್ಲೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದರ ತನಿಖೆಗಾಗಿ ಪೊಲೀಸರು ಈಡಿ ಕಚೇರಿಯಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದರು ಎಂದು ಪಿಟಿಐ ವರದಿ ಮಾಡಿದೆ.

ಜಾರ್ಖಂಡ್ ಪೊಲೀಸರ ದಾಳಿಯನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿತು. ಹೈಕೋರ್ಟ್ ಈ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿತು.

ಜಾರ್ಖಂಡ್ ಸರಕಾರದ ಉದ್ಯೋಗಿ ಸಂತೋಷ್ ಕುಮಾರ್ ಎಂಬವರು ಜನವರಿ 12ರಂದು ಸಲ್ಲಿಸಿದ ದೂರಿನ ಆಧಾರದಲ್ಲಿ ಈಡಿ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ನೀರು ಪೂರೈಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ನಡೆಸಲಾದ ತನಿಖೆಯ ವೇಳೆ ಈಡಿ ಅಧಿಕಾರಿಗಳು ತನಗೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಅವರು ತನ್ನ ದೂರಿನಲ್ಲಿ ಆರೋಪಿಸಿದ್ದರು.

ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಜಾರ್ಖಂಡ್ ರಾಜ್ಯ ಪೊಲೀಸ್ ಅಧಿಕಾರಿಗಳು ಈಡಿ ಕಚೇರಿಯಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು ಎಂದು ರಾಂಚಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಇತ್ತೀಚೆಗೆ ಈಡಿ ಅಧಿಕಾರಿಗಳು ಮತ್ತು ಪಶ್ಚಿಮ ಬಂಗಾಳ ಪೊಲೀಸರ ನಡುವಿನ ಘರ್ಷಣೆಯ ಬಳಿಕ ಈ ಬೆಳವಣಿಗೆ ನಡೆದಿರುವುದು ಗಮನಾರ್ಹವಾಗಿದೆ. ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಮ್‌ಸಿ)ನ ಚುನಾವಣಾ ತಂತ್ರಗಾರಿಕೆ ಸಂಸ್ಥೆ ಐ-ಪ್ಯಾಕ್‌ನ ಪ್ರಧಾನ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್‌ರ ನಿವಾಸದಲ್ಲಿ ಈಡಿ ದಾಳಿ ನಡೆಸಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಲವಂತವಾಗಿ ನಿವಾಸವನ್ನು ಪ್ರವೇಶಿಸಿ ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣೆಗೆ ಸಂಬಂಧಿಸಿದ ದತ್ತಾಂಶಗಳನ್ನು ಕದ್ದಿದ್ದಾರೆ ಎಂಬುದಾಗಿ ಪಶ್ಚಿಮ ಬಂಗಾಳ ಸರಕಾರ ಆರೋಪಿಸಿತ್ತು.

ಜಾರ್ಖಂಡ್ ಹೈಕೋರ್ಟ್ ಶುಕ್ರವಾರ, ಹಲ್ಲೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಿರುದ್ಧದ ಪೊಲೀಸ್ ತನಿಖೆಗೆ ತಡೆಯಾಜ್ಞೆ ನೀಡಿತು ಹಾಗೂ ಯಾವುದೇ ಭದ್ರತಾ ಲೋಪವಾದರೆ ರಾಂಚಿಯ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ರಾಕೇಶ್ ರಂಜನ್‌ರನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದು ಹೇಳಿದೆ.

ಈಡಿ ಕಚೇರಿ ಮತ್ತು ಅದರ ಅಧಿಕಾರಿಗಳಿಗೆ ಭದ್ರತೆ ನೀಡಲು ಸಿಆರ್‌ಪಿಎಫ್, ಬಿಎಸ್‌ಎಫ್ ಅಥವಾ ಯಾವುದಾದರೂ ಕೆಂದ್ರೀಯ ಅರೆಸೈನಿಕ ಪಡೆಗಳನ್ನು ನಿಯೋಜಿಸುವಂತೆ ನ್ಯಾಯಮೂರ್ತಿ ಸಂಜಯ್ ಕುಮಾರ್ ದ್ವಿಡೆ ಅವರ ಪೀಠವು ಕೇಂದ್ರ ಗೃಹ ಕಾರ್ಯದರ್ಶಿಗೆ ಆದೇಶ ನೀಡಿತು.

ಸಂತೋಷ್ ನಡೆಸಿದ್ದಾರೆನ್ನಲಾದ 23 ಕೋಟಿ ರೂಪಾಯಿ ಹಗರಣದ ಬಗ್ಗೆ ಈಡಿ ತನಿಖೆ ನಡೆಸುತ್ತಿತ್ತು ಎಂದು ಅದರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ವಿಷಯದಲ್ಲಿ ಈಡಿ ಈಗಾಗಲೇ 9 ಕೋಟಿ ರೂ. ವಶಪಡಿಸಿಕೊಂಡಿದೆ ಎಂದು ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News