ಬಂಗಾಳಿ ವಲಸಿಗರಿಗೆ ಕಿರುಕುಳ:ಮಳೆಯಲ್ಲಿಯೇ ಪ್ರತಿಭಟನಾ ಜಾಥಾ ನಡೆಸಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ | PC : PTI
ಕೋಲ್ಕತಾ,ಜು.16: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ಭಾಷಿಕರಿಗೆ ಕಿರುಕುಳವನ್ನು ಪ್ರತಿಭಟಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬುಧವಾರ ಇಲ್ಲಿ ಮಳೆಯಲ್ಲಿಯೇ ಜಾಥಾ ನಡೆಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಂಗಾಳಿ ವಲಸಿಗರನ್ನು ಗುರಿಯಾಗಿಸಿಕೊಂಡಿವೆ ಎಂದು ಆರೋಪಿಸಿದ ಅವರು, ಬಂಗಾಳವು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು ಮತ್ತು ಬಿಜೆಪಿ ನಾಚಿಕೆ ಪಟ್ಟುಕೊಳ್ಳಬೇಕು ಎಂದು ಹೇಳಿದರು.
‘ಬಿಜೆಪಿ ಏನು ಭಾವಿಸಿದೆ? ಅವರು ಬಂಗಾಳಿಗಳಿಗೆ ನೋವನ್ನುಂಟು ಮಾಡುತ್ತಾರೆಯೇ? ಬಂಗಾಳಿಗಳನ್ನು ಅವರು ರೊಹಿಂಗ್ಯಾ ಎಂದು ಕರೆಯುತ್ತಾರೆ. ರೊಹಿಂಗ್ಯಾಗಳು ಮ್ಯಾನ್ಮಾರ್ ನಲ್ಲಿದ್ದಾರೆ,ಇಲ್ಲಿ ಅಲ್ಲ. 22 ಲಕ್ಷ ಬಡ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ. ತವರಿಗೆ ಮರಳುವಂತೆ ನಾನು ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಅವರು ಇಲ್ಲಿ ಸುರಕ್ಷಿತವಾಗಿರುತ್ತಾರೆ. ಬಿಜೆಪಿ ಬಂಗಾಳಿ ಭಾಷಿಕರನ್ನು ಬಂಧನ ಕೇಂದ್ರಗಳಿಗೆ ಕಳುಹಿಸುತ್ತಿದೆ. ಪಶ್ಚಿಮ ಬಂಗಾಳ ಭಾರತದಲ್ಲಿಲ್ಲವೇ? ಎಂದು ಹೇಳಿದ ಮಮತಾ, ಬಿಜೆಪಿ ಬಂಗಾಳಿಗಳ ತ್ಯಾಗ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆತಿದೆಯೇ ಎಂದು ಪ್ರಶ್ನಿಸಿದರು.
ತನ್ನ ಸರಕಾರವು ಬಾಂಗ್ಲಾದೇಶಿ ನುಸುಳುಕೋರರನ್ನು ಬೆಂಬಲಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು,ಗಡಿಯು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿದೆ. ಅವರೇಕೆ ನುಸುಳುಕೋರರನ್ನು ತಡೆಯುತ್ತಿಲ್ಲ ಎಂದು ಕೇಳಿದರು.
ಅವರು 2002ರ ಮತದಾರರ ಪಟ್ಟಿಯನ್ನು ಪರಿಶೀಲಿಸುತ್ತಿರುವುದಾಗಿ ಹೇಳುತ್ತಿದ್ದಾರೆ. 2002ರ ನಂತರ ಎಷ್ಟೋ ಮರಣಗಳು ಮತ್ತು ಜನನಗಳು ಸಂಭವಿಸಿವೆ. ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭಗೊಂಡಾಗ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ಅಗತ್ಯವಾದರೆ ನಿಮ್ಮ ಕೆಲಸದಿಂದ ವಿರಾಮ ಪಡೆದುಕೊಳ್ಳಿ ಎಂದು ಹೇಳಿದ ಅವರು, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿರುವವರನ್ನು ಜೈಲಿಗೂ ಕಳುಹಿಸಬಹುದು ಎಂದು ಎಚ್ಚರಿಕೆ ನೀಡಿದರು.
ಮುಂದಿನ ವರ್ಷ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು ನಡೆಸಲು ಚುನಾವಣಾ ಆಯೋಗವು ನಿರ್ಧರಿಸಿದೆ. ಇಂತಹ ಪರಿಷ್ಕರಣೆ ಪ್ರಸ್ತುತ ಬಿಹಾರದಲ್ಲಿ ನಡೆಯುತ್ತಿದೆ. ಇದು ಮತದಾರರ ಪಟ್ಟಿಯಿಂದ ಮತದಾರರ, ವಿಶೇಷವಾಗಿ ವಲಸಿಗರು ಮತ್ತು ದುರ್ಬಲ ವರ್ಗಗಳಿಗೆ ಸೇರಿದವರ ಹೆಸರುಗಳನ್ನು ಅಳಿಸಲು ಷಡ್ಯಂತ್ರದ ಭಾಗವಾಗಿದೆ ಎಂದು ಮಮತಾ ಈ ಹಿಂದೆ ಆರೋಪಿಸಿದ್ದರು.