×
Ad

ಲೋಕಸಭೆಯಲ್ಲಿ ‘ಬಂಕಿಮ್ ದಾ’ಹೇಳಿಕೆಗಾಗಿ ಪ್ರಧಾನಿ ಕ್ಷಮೆಯಾಚನೆಗೆ ಮಮತಾ ಆಗ್ರಹ

Update: 2025-12-09 22:06 IST

ಮಮತಾ ಬ್ಯಾನರ್ಜಿ | Photo Credit  : PTI 

ಕೂಚ್ಬೆಹಾರ್(ಪ.ಬಂ.),ಡಿ.9: ಪ್ರಧಾನಿ ನರೇಂದ್ರ ಮೋದಿಯವರು ಖ್ಯಾತ ಲೇಖಕ ಹಾಗೂ ಕವಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರನ್ನು ‘ಬಂಕಿಮ್ ದಾ ’ ಎಂದು ಕರೆಯುವ ಮೂಲಕ ಅವರನ್ನು ಅವಮಾನಿಸಿದ್ದಾರೆ ಎಂದು ಮಂಗಳವಾರ ಆರೋಪಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು,ಇದಕ್ಕಾಗಿ ಪ್ರಧಾನಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಕೂಚ್ಬೆಹಾರ್ ಜಿಲ್ಲೆಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಮಮತಾ, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮೋದಿಯವರು ಇನ್ನೂ ಜನಿಸಿರಲಿಲ್ಲ,ಆದರೂ ಅವರು ಬಂಗಾಳದ ಮಹಾನ್ ಸಾಂಸ್ಕೃತಿಕ ಪ್ರಭಾವಿಗಳಲ್ಲೋರ್ವರನ್ನು ಲಘುವಾಗಿ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.

‘ಅವರಿಗೆ ಸಲ್ಲಬೇಕಾಗಿದ್ದ ಕನಿಷ್ಠ ಗೌರವವನ್ನೂ ನೀವು ತೋರಿಸಿಲ್ಲ. ಇದಕ್ಕಾಗಿ ನೀವು ದೇಶದ ಕ್ಷಮೆಯನ್ನು ಯಾಚಿಸಬೇಕು’ ಎಂದರು.

ಈ ವಿವಾದವು ಸೋಮವಾರ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಲೋಕಸಭೆಯಲ್ಲಿ ಚರ್ಚೆಯ ಸಂದರ್ಭ ಪ್ರಧಾನಿಯವರು ಕವಿ ಬಂಕಿಮ್ಚಂದ್ರ ರನ್ನು ಉಲ್ಲೇಖಿಸಿದ್ದಕ್ಕೆ ಸಂಬಂಧಿಸಿದೆ.

ಬಂಕಿಮ್ ಜೊತೆ ‘ದಾ’ ಸೇರಿಸಿದ್ದನ್ನು ಆಕ್ಷೇಪಿಸಿದ್ದ ಟಿಎಂಸಿ ಸಂಸದ ಸೌಗತ ರಾಯ್ ಅವರು,ಬದಲಿಗೆ ‘ಬಂಕಿಮ್ ಬಾಬು’ ಎಂದು ಹೇಳುವಂತೆ ಮೋದಿಯವರನ್ನು ಆಗ್ರಹಿಸಿದ್ದರು.

ಅವರ ಭಾವನೆಯನ್ನು ತಕ್ಷಣ ಗೌರವಿಸಿದ್ದ ಮೋದಿ,‘‘ನಾನು ಬಂಕಿಮ್ ‘ಬಾಬು’ ಎಂದು ಹೇಳುತ್ತೇನೆ. ಧನ್ಯವಾದಗಳು, ನಾನು ನಿಮ್ಮ ಭಾವನೆಯನ್ನು ಗೌರವಿಸುತ್ತೇನೆ ’’ಎಂದು ತಿಳಿಸಿದ್ದರು. ಇದೇ ವೇಳೆ ತಾನು ಈಗಲೂ ರಾಯ್ ಅವರನ್ನು ‘ದಾದಾ’ ಎಂದು ಕರೆಯಬಹುದೇ ಎಂದು ಲಘು ಧಾಟಿಯಲ್ಲಿ ಪ್ರಶ್ನಿಸಿದ್ದರು.

ಮಂಗಳವಾರ ಬಿಜೆಪಿ ವಿರುದ್ಧವೂ ದಾಳಿ ನಡೆಸಿದ ಮಮತಾ, ಅದು ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಸಂಸ್ಕೃತಿ,ಭಾಷೆ ಮತ್ತು ಪರಂಪರೆಯನ್ನು ನಾಶಗೊಳಿಸುತ್ತದೆ ಎಂದು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News