West Bengal | SIRಗೆ ಚುನಾವಣಾ ಆಯೋಗ ಬಿಜೆಪಿ ಐಟಿ ಸೆಲ್ ನ ಮೊಬೈಲ್ ಆ್ಯಪ್ ಬಳಸುತ್ತಿದೆ: ಸಿಎಂ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ | Photo Credit : PTI
ಕೋಲ್ಕತಾ, ಜ. 6: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಚುನಾವಣಾ ಆಯೋಗದ ವಿರುದ್ಧ ತಮ್ಮ ಟೀಕೆಯನ್ನು ತೀವ್ರಗೊಳಿಸಿದ್ದಾರೆ. ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತಂತೆ ಅವರು ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗ ಬಿಜೆಪಿಯ ಐಟಿ ಸೆಲ್ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ಅನ್ನು ಬಳಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಮುಂಬರುವ ಗಂಗಾಸಾಗರ್ ಮೇಳದ ಸಿದ್ಧತೆಯ ಮೇಲ್ವಿಚಾರಣೆಗೆ ದಕ್ಷಿಣ 24 ಪರಗಣ ಜಿಲ್ಲೆಯ ಸಾಗರ್ ಐಲ್ಯಾಂಡ್‌ಗೆ ಎರಡು ದಿನಗಳ ಭೇಟಿ ಮುಕ್ತಾಯಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಎಲ್ಲಾ ರೀತಿಯ ತಪ್ಪು ನಡೆಗಳನ್ನು ಅನುಸರಿಸುತ್ತಿದೆ ಎಂದು ಹೇಳಿದರು.
‘‘ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಚುನಾವಣಾ ಆಯೋಗ ಅರ್ಹ ಮತದಾರರನ್ನು ಮೃತರು, ವೃದ್ಧರು ಹಾಗೂ ವಿಚಾರಣೆಗೆ ಹಾಜರಾಗಲು ಅಸ್ವಸ್ಥರು ಎಂದು ಗುರುತಿಸುತ್ತಿದೆ. ಈ ಪ್ರಕ್ರಿಯೆಗೆ ಬಿಜೆಪಿಯ ಐಟಿ ಸೆಲ್ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ಅನ್ನು ಬಳಸಲಾಗುತ್ತಿದೆ. ಇದು ಕಾನೂನುಬಾಹಿರ, ಅಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ. ಇದು ಹೀಗೆ ಮುಂದುವರಿಯಬಾರದು’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
‘‘ವಿಶೇಷ ಪರಿಷ್ಕರಣೆಯಲ್ಲಿ ಭಾಗವಹಿಸುವ ಸಂದರ್ಭ ಜನರು ಜಾಗರೂಕರಾಗಿರಬೇಕು. ಸಹಾಯ ಬೇಕಾದವರ ಪಕ್ಕದಲ್ಲಿ ನಿಲ್ಲಬೇಕು. ಅವರು ನನ್ನನ್ನು ಬೆಂಬಲಿಸುವ ಅಗತ್ಯವಿಲ್ಲ. ಈ ಪ್ರಕ್ರಿಯೆಯಿಂದ ತೊಂದರೆಗೊಳಗಾಗುವವರಿಗೆ ಮಾತ್ರ ಬೆಂಬಲಿಸಿ’’ ಎಂದು ಅವರು ಹೇಳಿದ್ದಾರೆ.