ಗುಜರಾತ್| ಗರ್ಭಿಣಿ ಪತ್ನಿ ಮೇಲೆ ದಾಳಿ ಮಾಡಿದ ಬೆಕ್ಕನ್ನು ಕೊಂದ ವ್ಯಕ್ತಿಯ ಬಂಧನ!
PC: istockphoto
ಅಹ್ಮದಾಬಾದ್: ಆರು ತಿಂಗಳ ಗರ್ಭಿಣಿ ಪತ್ನಿಯ ಮೇಲೆ ದಾಳಿ ಮಾಡಿದೆ ಎನ್ನಲಾದ ಬೆಕ್ಕನ್ನು ಅಮಾನುಷವಾಗಿ ಕೊಂದ ಆರೋಪದಲ್ಲಿ 21 ವರ್ಷದ ವ್ಯಕ್ತಿಯೊಬ್ಬನನ್ನು ವದಾಜ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮಹಿಳೆ ಬೆಕ್ಕಿಗೆ ಹಾಲು ನೀಡುತ್ತಿದ್ದ ವೇಳೆ ಬೆಕ್ಕು ದಾಳಿ ಮಾಡಿತ್ತು ಎನ್ನಲಾಗಿದೆ. ಈ ಘಟನೆಯ ಭಯಾನಕ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಬೆಕ್ಕನ್ನು ತೀರಾ ಕ್ರೂರ ವಿಧಾನದಲ್ಲಿ ಕೊಂದ ಬಗ್ಗೆ ಪ್ರಾಣಿ ಕಲ್ಯಾಣ ಹೋರಾಟಗಾರರು ಹಾಗೂ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಭಾನುವಾರ ತನ್ನ 20 ವರ್ಷದ ಗರ್ಭಿಣಿ ಪತ್ನಿಯ ಮೇಲೆ ಬೆಕ್ಕು ದಾಳಿ ಮಾಡಿದ್ದರಿಂದ ತಾಳ್ಮೆ ಕಳೆದುಕೊಂಡ ರಾಹುಲ್ ದಂತಾನಿ ಎಂಬಾತ ಬೆಕ್ಕನ್ನು ಕೊಂದಿದ್ದ ಎನ್ನಲಾಗಿದೆ. ಬೆಕ್ಕಿನ ದಾಳಿಯಿಂದ ಮಹಿಳೆ ಅಸ್ವಸ್ಥಗೊಂಡಿದ್ದಾಳೆ ಎನ್ನಲಾಗಿದ್ದು, ವೈದ್ಯರ ಸಲಹೆ ಪಡೆದಿದ್ದಾರೆ. ಈ ಘಟನೆಯಿಂದ ಕೋಪಗೊಂಡ ದಂತಾನಿ, ಇತರ ಇಬ್ಬರ ಜತೆ ಸೇರಿ ಬೆಕ್ಕನ್ನು ಸಹಜ್ ಹೈಟ್ಸ್ ಅಪಾರ್ಟ್ಮೆಂಟ್ ಬಳಿಯ ಖಾಲಿ ನಿವೇಶನಕ್ಕೆ ಒಯ್ದು ಅಮಾನುಷವಾಗಿ ಹತ್ಯೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಬೆಕ್ಕನ್ನು ಗಂಟುಮೂಟೆ ಕಟ್ಟಿಕೊಂಡು ದ್ವಿಚಕ್ರವಾಹನದಲ್ಲಿ ಒಯ್ದ ವ್ಯಕ್ತಿ, ಮೂಟೆಯನ್ನು ನೆಲಕ್ಕೆ ಬಡಿದು ಬೆಕ್ಕನ್ನು ಕೊಲ್ಲುತ್ತಿರುವುದು ವಿಡಿಯೊದಲ್ಲಿ ಕಂಡುಬರುತ್ತಿದೆ. ಬಳಿಕ ಬೆಕ್ಕನ್ನು ಹೊರತೆಗೆದು ಎಸೆಯಲಾಗಿದೆ. ಒಬ್ಬ ಆರೋಪಿ ಬೆಕ್ಕಿನ ಕುತ್ತಿಗೆಗೆ ಕಾಲಿನಿಂದ ಒತ್ತುತ್ತಿದ್ದರೆ, ಮತ್ತೊಬ್ಬ ದೊಡ್ಡ ಕಲ್ಲಿನಿಂದ ಜಜ್ಜುತ್ತಿರುವುದು ದಾಖಲಾಗಿದೆ. ಆರೋಪಿಯು ಬೆಕ್ಕನ್ನು ಒದೆಯುತ್ತಿರುವ ಹಾಗೂ ಅದರ ಜತೆ ನಿಂತು ಫೋಟೊಗೆ ಫೋಸ್ ನೀಡುತ್ತಿರುವ ದೃಶ್ಯಾವಳಿಯೂ ಜಾಲತಾಣದಲ್ಲಿ ಹರಿದಾಡುತ್ತಿದೆ. ತೀವ್ರ ಗಾಯದಿಂದ ಬೆಕ್ಕು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.
ಜಾಲತಾಣಗಳಲ್ಲಿ ಈ ವಿಡಿಯೊ ಹರಿದಾಡಿದ ಬೆನ್ನಲ್ಲೇ ಪ್ರಾಣಿ ಕಲ್ಯಾಣ ಸಂಸ್ಥೆಯ ಸ್ವಯಂಸೇವಕ ವಿರಾಲ್ ಪಟೇಲ್ ಎನ್ನುವವರು ವದಾಜ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.