400 ಕೆಜಿ ಆರ್‌ಡಿಎಕ್ಸ್ ಬಳಸಿ ಮುಂಬೈ ಸ್ಫೋಟಿಸುವುದಾಗಿ ಬೆದರಿಕೆ : ಆರೋಪಿ ಅಶ್ವಿನ್ ಕುಮಾರ್ ಬಂಧನ
ಅಶ್ವಿನ್ ಕುಮಾರ್ ಸುಪ್ರಾ (Photo:X/@zoo_bear)
ಮುಂಬೈ : 400 ಕೆಜಿ ಆರ್‌ಡಿಎಕ್ಸ್ ಬಳಸಿ ಮುಂಬೈ ನಗರದಲ್ಲಿ ದೊಡ್ಡ ಮಟ್ಟದಲ್ಲಿ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾದ ಅಶ್ವಿನ್ ಕುಮಾರ್ ಸುಪ್ರಾ ಬಂಧಿತ ಆರೋಪಿ. ಈತ ಮೂಲತಃ ಬಿಹಾರದವನಾಗಿದ್ದಾನೆ. ಈತನಿಂದ ಬೆದರಿಕೆ ಸಂದೇಶ ಕಳುಹಿಸಲು ಬಳಸಿದ ಫೋನ್ ಮತ್ತು ಸಿಮ್ ಕಾರ್ಡ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅಶ್ವಿನ್ ಕುಮಾರ್ ಸುಪ್ರಾನನ್ನು ಮುಂಬೈಗೆ ಕರೆತರಲಾಗುತ್ತಿದೆ.
ಮುಂಬೈ ಸಂಚಾರ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಗುರುವಾರ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ನಗರದಾದ್ಯಂತ 34 ವಾಹನಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ. 14 ಭಯೋತ್ಪಾದಕರು 400 ಕೆಜಿ ಆರ್‌ಡಿಎಕ್ಸ್‌ನೊಂದಿಗೆ ನಗರವನ್ನು ಪ್ರವೇಶಿಸಿದ್ದಾರೆ ಎಂದು ಸಂದೇಶದಲ್ಲಿ ಹೇಳಿದ್ದನು.
ಗಣೇಶ ಹಬ್ಬದ ಅಂತಿಮ ದಿನವಾದ ಅನಂತ ಚತುರ್ದಶಿಗೆ ಪೊಲೀಸರು ನಗರದಲ್ಲಿ ಬಂದೋಬಸ್ತ್‌ಗೆ ಸಿದ್ಧತೆ ನಡೆಸುತ್ತಿದ್ದಾಗ ಈ ಬೆದರಿಕೆ ಸಂದೇಶ ಬಂದಿತ್ತು. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.