ಮಹಾರಾಷ್ಟ್ರ: ಕೇಂದ್ರ ಸಚಿವ ಗಡ್ಕರಿ ನಿವಾಸಕ್ಕೆ ಬಾಂಬ್ ಬೆದರಿಕೆ, ಆರೋಪಿ ಉಮೇಶ್ ವಿಷ್ಣು ರಾವತ್ ಬಂಧನ
Photo Credit: PTI
ನಾಗ್ಪುರ,ಆ.3: ಇಲ್ಲಿಯ ವಾರ್ಧಾ ರಸ್ತೆಯಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಿವಾಸಕ್ಕೆ ಬಾಂಬ್ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೋಲಿಸರು ಬಂಧಿಸಿದ್ದಾರೆ. ಘಟನೆಯ ಬಳಿಕ ಸಚಿವರ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಬಂಧಿತ ಆರೋಪಿಯನ್ನು ಉಮೇಶ್ ವಿಷ್ಣು ರಾವತ್ ಎಂದು ಗುರುತಿಸಲಾಗಿದ್ದು, ಆತ ನಗರದ ಮದ್ಯದಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೋಲಿಸರು ತಿಳಿಸಿದರು.
ಪೋಲಿಸರ ಪ್ರಕಾರ ಹತ್ತು ನಿಮಿಷಗಳಲ್ಲಿ ಮಹಲ್ ಪ್ರದೇಶದಲ್ಲಿಯ ಗಡ್ಕರಿಯವರ ನಿವಾಸವನ್ನು ಸ್ಫೋಟಿಸುವುದಾಗಿ ಎಚ್ಚರಿಕೆಯ ಕರೆ ನಗರದ ಕಂಟ್ರೋಲ್ ರೂಮ್ ಗೆ ಬಂದಿತ್ತು. ಕರೆಯು ನಾಗ್ಪುರದ ಸಕ್ಕರಧಾರಾ ನಿವಾಸಿ ರಾವುತ್ ಹೆಸರಿನಲ್ಲಿ ನೋಂದಾಯಿತ ಮೊಬೈಲ್ ನಂಬರ್ ನಿಂದ ಬಂದಿದ್ದನ್ನು ಪತ್ತೆ ಹಚ್ಚಿದ ಪೋಲಿಸರು ಆತನನ್ನು ಮನೆಯಿಂದ ಬಂಧಿಸಿದ್ದಾರೆ.
ಕರೆ ಬಂದ ತಕ್ಷಣ ಪೋಲಿಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಗಡ್ಕರಿಯವರ ನಿವಾಸಕ್ಕೆ ಧಾವಿಸಿ ಸಮಗ್ರ ತಪಾಸಣೆ ನಡೆಸಿದ್ದು, ಬಾಂಬ್ ಬೆದರಿಕೆ ಹುಸಿ ಎನ್ನುವುದು ದೃಢಪಟ್ಟಿದೆ.
ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ರಾವುತ್ ನನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಆತ ಯಾವುದೇ ಕ್ರಿಮಿನಲ್ ಇತಿಹಾಸವನ್ನು ಹೊಂದಿಲ್ಲ. ಈ ಹಿಂದೆ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಡಿಸಿಪಿ ಎಸ್.ಆರ್.ರೆಡ್ಡಿ ಸುದ್ದಿಸಂಸ್ಥೆಗೆ ತಿಳಿಸಿದರು.