×
Ad

ಭೋಪಾಲ್ : ಆಸ್ಪತ್ರೆಯಿಂದ ಹೊರಬಂದು ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ ‘ಕೋಮಾ’ ಸ್ಥಿತಿಯಲ್ಲಿದ್ದ ರೋಗಿ!

Update: 2025-03-08 12:09 IST

Screengrab:X/@AmitYji127

ಭೋಪಾಲ್ : ಮಧ್ಯಪ್ರದೇಶದ ರತ್ಲಾಮ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರು ಕೋಮಾದಲ್ಲಿದ್ದಾನೆ ಎಂದು ಹೇಳಿದ ರೋಗಿಯೋರ್ವ ತಾನಾಗಿಯೇ ಆಸ್ಪತ್ರೆಯಿಂದ ಹೊರಬಂದು ಚಿಕಿತ್ಸೆಗಾಗಿ 1 ಲಕ್ಷ ರೂ. ವೈದ್ಯರು ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಗ್ಯ ಇಲಾಖೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ.

ವರದಿ ಪ್ರಕಾರ, ದೀನದಯಾಳ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಾಟೆಯಲ್ಲಿ ರತ್ಲಾಮ್‌ನ ಮೋತಿ ನಗರದ ನಿವಾಸಿ ಬಂಟಿ ನಿನಾಮ ಗಾಯಗೊಂಡಿದ್ದರು. ಮೊದಲು ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಯಿತು.

ವೈರಲ್ ವೀಡಿಯೊದಲ್ಲಿ, ಮೂಗಿಗೆ ಟ್ಯೂಬ್ ಮತ್ತು ಸೊಂಟದ ಸುತ್ತ ಕೊಲೊಸ್ಟೊಮಿ ಚೀಲ ಹಾಕಿರುವ ಬಂಟಿ ನಿನಾಮಾ ಅರೆಬೆತ್ತಲೆಯಾಗಿ ನಿಂತುಕೊಂಡಿರುವುದು ಕಂಡು ಬಂದಿದೆ. ಅವರು ವೈದ್ಯರು ಚಿಕಿತ್ಸೆಗಾಗಿ 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು.

ಬಂಟಿ ನಿನಾಮ ಅವರ ಪತ್ನಿ ಕೂಡ ಆಸ್ಪತ್ರೆಯ ಆಡಳಿತದ ವಿರುದ್ಧ ಗಂಭೀರ ಆರೋಪ ಮಾಡಿದರು. ನನ್ನ ಪತಿ ಕೋಮಾದಲ್ಲಿರುವ ಬಗ್ಗೆ ನಮಗೆ ತಿಳಿಸಲಾಯಿತು. 12 ಗಂಟೆಯೊಳಗೆ 40 ಸಾವಿರ ಬಿಲ್ ಪಾವತಿಸಿದೆ, ಹೆಚ್ಚಿನ ಹಣದ ವ್ಯವಸ್ಥೆ ಮಾಡಲು ಹೊರಗೆ ಹೋಗಿದ್ದ ನಾನು ವಾಪಸ್ ಬರುವಾಗ ಸ್ವತಃ ನನ್ನ ಪತಿಯೇ ಆಸ್ಪತ್ರೆಯ ಹೊರಗೆ ನಿಂತುಕೊಂಡಿದ್ದರು ಎಂದು ಹೇಳಿದರು.

ಈ ಕುರಿತು ಆರೋಗ್ಯ ಅಧಿಕಾರಿ ಡಾ ಎಂಎಸ್ ಸಾಗರ್ ಪ್ರತಿಕ್ರಿಯಿಸಿ, ಈ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು. ನಿನಾಮಾ ಅವರ ಆರೋಪಗಳನ್ನು ಆಸ್ಪತ್ರೆಯ ಆಡಳಿತ ಮಂಡಳಿ ನಿರಾಕರಿಸಿದೆ. ಐಸಿಯುನಲ್ಲಿ ದಾಖಲಾಗಿರುವ ರೋಗಿಯ ಒಟ್ಟು ಬಿಲ್ ಕೇವಲ 8,000 ರೂ. ಹೆಚ್ಚುವರಿ ಹಣದ ಬೇಡಿಕೆ ಆರೋಪ ಆಧಾರ ರಹಿತ ಎಂದು ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News