×
Ad

ಅಹಮದಾಬಾದ್‌ | ಜಗನ್ನಾಥ ರಥಯಾತ್ರೆಯ ಮೆರವಣಿಗೆಯಲ್ಲಿ ಕೆರಳಿದ ಆನೆಯಿಂದ ದಾಂಧಲೆ; ಒಬ್ಬ ವ್ಯಕ್ತಿಗೆ ಗಾಯ

Update: 2025-06-27 16:30 IST
PC : PTI 

ಅಹಮದಾಬಾದ್: ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆದ ಜಗನ್ನಾಥ ರಥಯಾತ್ರೆ ಮೆರವಣಿಗೆಯಲ್ಲಿ ಅತಿಯಾದ ಶಬ್ದದಿಂದ ಆನೆಯೊಂದು ಕೆರಳಿ ದಾಂಧಲೆ ಎಬ್ಬಿಸಿದ ಪರಿಣಾಮ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಆನೆಯೊಂದು ಬ್ಯಾರಿಕೇಡ್ ಮುರಿದು ಕಿರಿದಾದ ರಸ್ತೆಗೆ ಧಾವಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇರೆ ಎರಡು ಆನೆಯ ಮೇಲೆ ಇದ್ದ ಮಾವುತರು ಆನೆ ದಾಂಧಲೆ ಎಬ್ಬಿಸುತ್ತಿದ್ದಂತೆ, ಅದನ್ನು ಹಿಂಬಾಲಿಸಿ ನಿಯಂತ್ರಿಸಿದರು. ಮೆರವಣಿಗೆ ಅದರ ನಿಗದಿತ ಮಾರ್ಗದಲ್ಲಿ ಸುಗಮವಾಗಿ ಸಾಗುವಂತೆ ನೋಡಿಕೊಂಡರು ಎಂದು ನಗರದ ಕಂಕರಿಯಾ ಮೃಗಾಲಯದ ಅಧೀಕ್ಷಕ ಆರ್‌ಕೆ ಸಾಹು ಹೇಳಿದ್ದಾರೆ.

"ಖಾಡಿಯಾ ಪ್ರದೇಶದಲ್ಲಿ ಆನೆಯೊಂದು ದಾಂಧಲೆ ಎಬ್ಬಿಸಿ ಕಿರಿದಾದ ರಸ್ತೆಗೆ ಪ್ರವೇಶಿಸಿದ್ದರಿಂದ ಒಬ್ಬರು ಗಾಯಗೊಂಡಿದ್ದಾರೆ. ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೆರವಣಿಗೆ ನಿಗದಿಯಂತೆ ನಡೆಯುತ್ತಿದೆ" ಎಂದು ನಿಯಂತ್ರಣ ಕೊಠಡಿಯ ಪೊಲೀಸ್ ಉಪ ಆಯುಕ್ತ ಕೋಮಲ್ ವ್ಯಾಸ್ ಹೇಳಿದ್ದಾರೆ.

148 ನೇ ಜಗನ್ನಾಥ ರಥಯಾತ್ರೆ ಶುಕ್ರವಾರ ಬೆಳಿಗ್ಗೆ ಅಹಮದಾಬಾದ್‌ ನಲ್ಲಿ ಪ್ರಾರಂಭವಾಗಿದೆ. ಸಾವಿರಾರು ಭಕ್ತರು ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 400 ವರ್ಷ ಹಳೆಯದಾದ ಜಗನ್ನಾಥ ದೇವಸ್ಥಾನದಿಂದ ಹೊರಟ ಈ ಭವ್ಯ ಮೆರವಣಿಗೆಯು ಹಳೆಯ ನಗರದ ಮೂಲಕ ಸಾಗಿ ರಾತ್ರಿ 8 ಗಂಟೆಯ ಹೊತ್ತಿಗೆ ಹಿಂತಿರುಗುವ ನಿರೀಕ್ಷೆಯಿದೆ. ಮೆರವಣಿಗೆಯಲ್ಲಿ 17 ಆನೆಗಳು, 100 ಟ್ರಕ್‌ಗಳು ಮತ್ತು 30 ಅಖಾಡಗಳು ಇರುತ್ತವೆ. ಹಗಲಿನ ವೇಳೆ ಈ ಮೆರವಣಿಗೆಯು 16 ಕಿ.ಮೀ. ಕ್ರಮಿಸುತ್ತದೆ.

ಈ ಆನೆಗಳಲ್ಲಿ ಒಂದು ಮಾತ್ರ ಗಂಡು ಆನೆಯಿತ್ತು, ಎಂದು ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳ ಆರೋಗ್ಯವನ್ನು ಪರಿಶೀಲಿಸುವ ಮತ್ತು ಕಾರ್ಯಕ್ರಮಕ್ಕೂ ಮುನ್ನ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನೀಡುವ ಜವಾಬ್ದಾರಿಯನ್ನು ಹೊಂದಿರುವ ಸಾಹು ಹೇಳಿದರು.

"ಮೆರವಣಿಗೆ ಖಾದಿಯಾ ಗೇಟ್ ತಲುಪಿದಾಗ, ಜೋರಾದ ಸಂಗೀತ ಮತ್ತು ಶಿಳ್ಳೆ ಶಬ್ದಗಳಿಂದ ಗಂಡು ಆನೆ ಇದ್ದಕ್ಕಿದ್ದಂತೆ ವಿಚಲಿತಗೊಂಡಿತು. ಕೆರಳಿದ ಆನೆ ಓಡಲು ಪ್ರಾರಂಭಿಸಿತು. ಅದು ನಿಗದಿತ ಮಾರ್ಗದಿಂದ ದೂರ ಸರಿಯಿತು. ಎರಡು ಹೆಣ್ಣು ಆನೆಗಳ ಮೇಲಿದ್ದ ಮಾವುತರು ಗಂಡು ಆನೆಯನ್ನು ಹಿಂಬಾಲಿಸಿ ಅದನ್ನು ನಿಯಂತ್ರಿಸಿದರು”, ಎಂದು ಅವರು ಹೇಳಿದರು.

ವೈರಲ್ ವೀಡಿಯೊದಲ್ಲಿ, ಆನೆಯು ಬ್ಯಾರಿಕೇಡ್ ಅನ್ನು ಮುರಿದು ಕಿರಿದಾದ ರಸ್ತೆಯಲ್ಲಿ ಓಡುವುದು ಕಾಣುತ್ತದೆ.

"ಅರವಳಿಕೆ ಚುಚ್ಚುಮದ್ದಿನ ಸಹಾಯವಿಲ್ಲದೆ ಆನೆಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಲಾಯಿತು. ನಂತರ ಗಂಡು ಮತ್ತು ಎರಡು ಹೆಣ್ಣು ಆನೆಗಳನ್ನು ಅದೇ ಸ್ಥಳದಲ್ಲಿ ಕಟ್ಟಲಾಯಿತು. ಕೆರಳಿದ ಆನೆಯು ಮೆರವಣಿಗೆಯಲ್ಲಿ ಆ ಬಳಿಕ ಭಾಗವಹಿಸಲಿಲ್ಲ", ಎಂದು ಸಾಹು ಹೇಳಿದರು.

“ಕಂಕರಿಯಾ ಮೃಗಾಲಯ, ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ವೈದ್ಯರ ಸಿಬ್ಬಂದಿ ಮೆರವಣಿಗೆಯಲ್ಲಿರುವ ಆನೆಗಳ ಮೇಲೆ ನಿಗಾ ಇಡುತ್ತಿದ್ದಾರೆ. ಅರವಳಿಕೆ ನೀಡುವ ಬಂದೂಕುಗಳೊಂದಿಗೆ ಮೂರು ತಂಡಗಳನ್ನು ಮಾರ್ಗದಲ್ಲಿ ನಿಯೋಜಿಸಲಾಗಿದೆ" ಎಂದು ಕಂಕರಿಯಾ ಮೃಗಾಲಯದ ಅಧೀಕ್ಷಕ ಆರ್‌ಕೆ ಸಾಹು ಅವರು ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News