ತನ್ನ ನಾಗರಿಕ ಎಂದು ಪಾಕಿಸ್ತಾನ ಒಪ್ಪಿಕೊಳ್ಳಲು ನಿರಾಕರಣೆ: 10 ವರ್ಷದಿಂದ ಜೈಲಿನಲ್ಲೇ ಕೊಳೆಯುತ್ತಿರುವ ವ್ಯಕ್ತಿ!
ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ ಸೂಚಿಸಿದ ಕಲ್ಕತ್ತಾ ಹೈಕೋರ್ಟ್
ಕಲ್ಕತ್ತಾ ಹೈಕೋರ್ಟ್
ಕೋಲ್ಕತ್ತಾ: ವಿದೇಶಿ ಪ್ರಜೆ ಎಂದು ಸಾಬೀತಾಗಿ, ಕಳೆದ 10 ವರ್ಷಗಳಿಂದ ಜೈಲಿನಲ್ಲಿರುವ ವ್ಯಕ್ತಿಯನ್ನು ತನ್ನ ಪ್ರಜೆ ಎಂದು ಒಪ್ಪಿಕೊಳ್ಳಲು ಪಾಕಿಸ್ತಾನ ನಿರಾಕರಿಸುತ್ತಿರುವುದರಿಂದ, ಈ ಕುರಿತು ಏನು ಕ್ರಮ ಕೈಗೊಳ್ಳಲು ಸಾಧ್ಯ ಎಂಬ ಬಗ್ಗೆ ಅಭಿಪ್ರಾಯ ಮಂಡಿಸುವಂತೆ ಕೇಂದ್ರ ಸರಕಾರಕ್ಕೆ ಕಲ್ಕತ್ತಾ ಹೈಕೋರ್ಟ್ ನಿರ್ದೇಶನ ನೀಡಿದೆ.
ಸದ್ಯ ಡುಂಡುಂ ಕೇಂದ್ರ ಸುಧಾರಣಾ ಕೇಂದ್ರದಲ್ಲಿರುವ ಪಿ.ಯೂಸುಫ್ ಎಂಬ ಅರ್ಜಿದಾರನು ತನ್ನನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡುವಂತೆ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾನೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಮೃತ ಸಿನ್ಹಾ, ಅರ್ಜಿದಾರ ಯೂಸುಫ್ ಗೆ ಸಂಬಂಧಿಸಿದಂತೆ ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಸೂಕ್ತ ಸೂಚನೆಗಳನ್ನು ಪಡೆಯುವಂತೆ ಭಾರತ ಸರಕಾರದ ಪರವಾಗಿ ಹಾಜರಿದ್ದ ವಕೀಲರಿಗೆ ಸೂಚಿಸಿದರು.
“ಒಂದು ವೇಳೆ ಅರ್ಜಿದಾರನನ್ನು ಬಿಡುಗಡೆ ಮಾಡಬಹುದೆ ಅಥವಾ ಇನ್ನೂ ಕೆಲಕಾಲ ಸೆರೆವಾಸದಲ್ಲಿರಬೇಕೆ ಎಂಬ ಕುರಿತು ಪ್ರಾಧಿಕಾರಗಳು ನಿರ್ದಿಷ್ಟವಾಗಿ ಮಾಹಿತಿ ನೀಡಬೇಕು” ಎಂದು ಬುಧವಾರ ನ್ಯಾಯಾಲಯ ನಿರ್ದೇಶನ ನೀಡಿದೆ.
ಭಾರತದಲ್ಲಿ ಅರ್ಜಿದಾರ ಯೂಸುಫ್ ಗೆ ವಿದೇಶಿ ಪ್ರಜೆ ಎಂದು ಶಿಕ್ಷೆಯಾಗಿದ್ದರೂ, ಪಾಕಿಸ್ತಾನ ಮಾತ್ರ ಆತನನ್ನು ತನ್ನ ಪ್ರಜೆ ಎಂದು ಅಂಗೀಕರಿಸಲು ನಿರಾಕರಿಸುತ್ತಿದೆ ಎಂಬ ಸಂಗತಿಯನ್ನು ಇದೇ ವೇಳೆ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.
ಈ ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 17ರಂದು ನಡೆಯಲಿದೆ.