ಮಹಾರಾಷ್ಟ್ರ | ಏಕನಾಥ್ ಶಿಂಧೆ ಅವರ ಪಿಎ ಎಂದು ಹೇಳಿಕೊಂಡು 18 ಜನರಿಗೆ 55 ಲಕ್ಷ ರೂ. ವಂಚನೆ; ದಂಪತಿ ವಿರುದ್ಧ ಪ್ರಕರಣ
ಏಕನಾಥ್ ಶಿಂಧೆ | PTI
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಆಪ್ತ ಸಹಾಯಕ ಎಂದು ಸುಳ್ಳು ಹೇಳಿಕೊಂಡು 18 ಜನರಿಂದ ಒಟ್ಟು 55 ಲಕ್ಷ ರೂ. ಹಣ ವಂಚನೆ ಪ್ರಕರಣ ಜಲಗಾಂವ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಪಚೋರಾ ತಾಲ್ಲೂಕಿನ ಹಿತೇಶ್ ರಮೇಶ್ ಸಾಂಘ್ವಿ ಮತ್ತು ಆತನ ಪತ್ನಿ ಅರ್ಪಿತಾ ಸಾಂಘ್ವಿ ವಿರುದ್ಧ ಶಾನಿಪೇತ್ ಪೊಲೀಸ್ ಠಾಣೆಯಲ್ಲಿ ವಂಚನೆ ಸೇರಿದಂತೆ ಹಲವು ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳು ಸರ್ಕಾರಿ ಉದ್ಯೋಗ, ಟೆಂಡರ್‌ಗಳು, ಎಂಎಚ್‌ಎಡಿಎ ವಸತಿ ಮನೆಗಳು ಮುಂತಾದ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿ ಜನರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದರು. ಡೈರಿ ಉದ್ಯಮಿ ಹರ್ಷಲ್ ಬಾರಿಯವರೊಂದಿಗೆ, ಸಾಂಘ್ವಿ ಅವರು ತಾವು ಉಪಮುಖ್ಯಮಂತ್ರಿಯವರ ಪಿಎ ಆಗಿದ್ದು, ದಕ್ಷಿಣ ಮುಂಬೈನ ಮಂತ್ರಾಲಯದಲ್ಲಿ ಕಚೇರಿಯಿದೆ ಎಂದು ಹೇಳಿಕೊಂಡಿದ್ದರು. ಎಂಎಚ್‌ಎಡಿಎ ಫ್ಲಾಟ್ ಕೊಡಿಸುವುದಾಗಿ ಹೇಳಿ 10 ಲಕ್ಷ ರೂಪಾಯಿ ಹಾಗೂ ಅವರ ಪತ್ನಿಗೆ ರೈಲ್ವೆ ಉದ್ಯೋಗಕ್ಕಾಗಿ 7 ಲಕ್ಷ ರೂಪಾಯಿ ಪಡೆದಿದ್ದರು.
ಆರೋಪಿಗಳು ನಕಲಿ ಲೆಟರ್‌ಹೆಡ್‌ಗಳು, ದಾಖಲೆಗಳು ಮತ್ತು ನೇಮಕಾತಿ ಪತ್ರಗಳನ್ನು ತೋರಿಸಿ ವಿಶ್ವಾಸಾರ್ಹತೆ ಮೂಡಿಸುತ್ತಿದ್ದರು. ನವೆಂಬರ್ 2024ರಿಂದ 2025ರ ಆಗಸ್ಟ್ 8ರವರೆಗೆ ಹರ್ಷಲ್ ಬಾರಿ ಅವರಿಂದ ಒಟ್ಟು 13.38 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಆ ಬಳಿಕವಷ್ಟೇ ಹರ್ಷಲ್ ಅವರಿಗೆ ತಾವು ಮೋಸ ಹೋಗಿರುವುದು ತಿಳಿಯಿತು.
ಬಾರಿ ಅವರು ಗುರುವಾರ ಪೊಲೀಸರಿಗೆ ದೂರು ಸಲ್ಲಿಸಿದ್ದು, ಸಾಂಘ್ವಿ ದಂಪತಿಗಳ ವಿರುದ್ಧ ವಂಚನೆ ಮತ್ತು ಇತರ ಸಂಬಂಧಿತ ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಈ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.