ಮಣಿಪುರ | ಶಂಕಿತ ಉಗ್ರರಿಂದ ದಾಳಿ ; CRPF ಯೋಧ ಸಾವು
PC : NDTV
ಇಂಫಾಲ: ಮಣಿಪುರದ ಜಿರಿಬಮ್ ಜಿಲ್ಲೆಯ ಮೂಂಗ್ಬಂಗ್ ಗ್ರಾಮದಲ್ಲಿ ರವಿವಾರ ಬೆಳಗ್ಗೆ ಶಂಕಿತ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯ ಯೋಧನೋರ್ವ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಇನ್ನೋರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೃತಪಟ್ಟ ಯೋಧನನ್ನು ಬಿಹಾರ್ ನಿವಾಸಿ ಅಜಯ್ ಕುಮಾರ್ ಝಾ (43) ಎಂದು ಗುರುತಿಸಲಾಗಿದೆ.
‘‘ಗುಂಡಿನ ದಾಳಿಯಿಂದ ಅವರ ತಲೆಗೆ ಗಾಯಗಳಾಗಿತ್ತು. ಅವರನ್ನು ಆಸ್ಪತ್ರೆಗೆ ತರುವಾಗ ಮೃತಪಟ್ಟಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತನ್ನ ‘ಎಕ್ಸ್’ನ ಪೋಸ್ಟ್ ನಲ್ಲಿ ಈ ದಾಳಿಯನ್ನು ಖಂಡಿಸಿದ್ದಾರೆ. ಅಲ್ಲದೆ, ಗಾಯಗೊಂಡ ಪೊಲೀಸ್ ಸಿಬ್ಬಂದಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
‘‘ಜಿರಿಬಮ್ ಜಿಲ್ಲೆಯಲ್ಲಿ ಇಂದು ಕುಕಿ ಉಗ್ರರು ಎಂದು ಶಂಕಿಸಲಾದ ಶಸಸ್ತ್ರ ಗುಂಪು ನಡೆಸಿದ ದಾಳಿಯಲ್ಲಿ CRPF ಯೋಧ ಸಾವನ್ನಪ್ಪಿರುರುವ ಘಟನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.
‘‘ಅವರ ಬಲಿದಾನ ವ್ಯರ್ಥವಾಗದು. ಮೃತಪಟ್ಟ ಯೋಧನ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ದಾಳಿಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಶೀಘ್ರದಲ್ಲಿ ಗುಣಮುಖನಾಗಲಿ ಎಂದು ಹಾರೈಸುತ್ತೇನೆ’’ ಎಂದು ಸಿಂಗ್ ಹೇಳಿದ್ದಾರೆ.
ಈ ಗ್ರಾಮದಲ್ಲಿ ಶನಿವಾರ ರಾತ್ರಿ ಕೂಡ ಗುಂಡಿನ ಹಾರಾಟದ ಸದ್ದು ಕೇಳಿ ಬಂದಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ರವಿವಾರದ ದಾಳಿಯ ಹಿನ್ನೆಲೆಯಲ್ಲಿ ಮೂನ್ಬಂಗ್ನಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಭದ್ರತಾ ಸಿಬ್ಬಂದಿಗೆ ಸೇರಿದ ವಾಹನವೊಂದು ಹಾನಿಗೀಡಾಗಿದೆ ಎಂದು ಅವರು ಹೇಳಿದ್ದಾರೆ.
ಮಣಿಪುರದಲ್ಲಿ ಕಳೆದ ವರ್ಷ ಮೇಯಿಂದ ಮೈತೈ ಹಾಗೂ ಕುಕಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆ ನಡೆಯುತ್ತಿದ್ದು, 200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.