ಭಾರೀ ಮಳೆಗೆ ಮಣಿಪುರ ತತ್ತರ
Update: 2025-09-14 22:09 IST
ಸಾಂದರ್ಭಿಕ ಚಿತ್ರ (PTI)
ಇಂಫಾಲ,ಸೆ.14: ಕಳೆದ 24 ತಾಸುಗಳಲ್ಲಿ ಮಣಿಪುರದ ವಿವಿಧೆಡೆ ಭಾರೀ ಮಳೆಯಾಗಿದ್ದು, ಪ್ರಮುಖ ನದಿಗಳಲ್ಲಿ ನೀರಿನಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ರಾಜ್ಯದ ವಿವಿಧ ತಗ್ಗುಪ್ರದೇಶಗಳು ಹಾಗೂ ಪರ್ವತ ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹವುಂಟಾಗಿದ್ದು, ಭೂಕುಸಿತದ ಘಟನೆಗಳು ವರದಿಯಾಗಿವೆ.
ಪೂರ್ವ ಇಂಫಾಲ ಜಿಲ್ಲೆಯ ಯಾಯಿಂಗಾಗ್‌ಪೊಕ್ಪಿ,ಸಂತಿಖೊಂಗ್‌ಬಾಲ್ ಸೇರಿದಂತೆ ಹಲವು ಪಟ್ಟಣಗಳು ಜಲಾವೃತಗೊಂಡಿವೆ. ಇಂಪಾಲ ಪಶ್ಚಿಮ,ಕಾಕವಾ ಹಾಗೂ ಸಗೊಲ್‌ಬಾಂದ್ ಕೂಡಾ ನೆರೆನೀರಿನಲ್ಲಿ ಮುಳುಗಿವೆ. ಹಲವೆಡೆ ಮನೆಗಳು ಹಾಗೂ ಕಟ್ಟಡಗಳಿಗೆ ನೆರೆ ನೀರು ನುಗ್ಗಿರುವುದಾಗಿ ವರದಿಯಾಗಿದೆ.
ಮಣಿಪುರದ ಹೆಚ್ಚಿನ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದ್ದು,ರವಿವಾರವಿಡೀ ಮುಂದುವರಿಯಲಿದೆಯೆಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.