ಮನ್ ಕಿ ಬಾತ್ | ವಿಜ್ಞಾನಿಯಾಗಿ ಒಂದು ದಿನವನ್ನು ಕಳೆಯುವಂತೆ ಜನರಿಗೆ ಪ್ರಧಾನಿ ಮೋದಿ ಆಗ್ರಹ
ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ರವಿವಾರ ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನ 119ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಸಂಶೋಧನಾ ಪ್ರಯೋಗಾಲಯಗಳು ಮತ್ತು ತಾರಾಲಯಗಳಿಗೆ ಭೇಟಿ ನೀಡಿ ವಿಜ್ಞಾನಿಯಾಗಿ ಒಂದು ದಿನವನ್ನು ಕಳೆಯುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವಂತೆ ಜನತೆಯನ್ನು ಆಗ್ರಹಿಸಿದರು.
ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತದ ಗಮನಾರ್ಹ ಸಾಧನೆಗಳ ಕುರಿತು ಮಾತನಾಡಿದ ಮೋದಿ, ಇಸ್ರೋ ರಾಕೆಟ್ ಉಡಾವಣೆಯಲ್ಲಿ ಶತಕ ಬಾರಿಸಿರುವುದನ್ನು ಎತ್ತಿ ತೋರಿಸಿದರು. ಚಂದ್ರಯಾನ, ಮಂಗಳಯಾನ ಮತ್ತು ಆದಿತ್ಯ ಎಲ್-1ರ ಯಶಸ್ಸುಗಳು ಹಾಗೂ ದಾಖಲೆಯ 104 ಉಪಗ್ರಹಗಳ ಉಡಾವಣೆ ಸೇರಿದಂತೆ ದೇಶದ ಹೆಚ್ಚುತ್ತಿರುವ ಬಾಹ್ಯಾಕಾಶ ಸಾಧನೆಗಳನ್ನು ಪ್ರಶಂಸಿಸಿದರು.
ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಸ್ಫೂರ್ತಿ ನೀಡಲು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಒಂದು ದಿನದ ಮಟ್ಟಿಗೆ ಅವರಿಗೆ ಹಸ್ತಾಂತರಿಸುವುದಾಗಿಯೂ ಮೋದಿ ಪ್ರಕಟಿಸಿದರು.
ಬೊಜ್ಜನ್ನು ಕಡಿಮೆ ಮಾಡಿಕೊಳ್ಳಲು ಅಥವಾ ತಡೆಯಲು ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಜನರನ್ನು ಉತ್ತೇಜಿಸಲು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿದಂತೆ ಗಣ್ಯ ವ್ಯಕ್ತಿಗಳ ಧ್ವನಿ ಸಂದೇಶಗಳನ್ನು ಮೋದಿ ಶ್ರೋತೃಗಳಿಗೆ ಕೇಳಿಸಿದರು.
ಪ್ರಧಾನಿ ಭಾಷಣದ ಪ್ರಮುಖಾಂಶಗಳು:
► ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ,ಆದರೆ ನಾನಿಂದು ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ. ಬದಲಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಅದ್ಭುತ ಶತಕದ ಬಗ್ಗೆ ಮಾತನಾಡುತ್ತೇನೆ. ಕಳೆದ ತಿಂಗಳು ಇಸ್ರೋದ 100ನೇ ರಾಕೆಟ್ ಉಡಾವಣೆಗೆ ದೇಶವು ಸಾಕ್ಷಿಯಾಗಿದೆ. ಬಾಹ್ಯಾಕಾಶ ಯಾನದಲ್ಲಿ ನಮ್ಮ ಸಾಧನೆಗಳ ಪಟ್ಟಿ ಬೆಳೆಯುತ್ತಲೇ ಇದೆ.
► ಮುಂದಿನ ತಿಂಗಳು,ಮಾರ್ಚ್ 8 ಅಂತರರಾಷ್ಟ್ರೀಯ ಮಹಿಳಾ ದಿನವಾಗಿದೆ. ಎಲ್ಲ ರೀತಿಗಳ ಜ್ಷಾನವು ದೇವಿಯ ವಿವಿಧ ರೂಪಗಳ ಅಭಿವ್ಯಕ್ತಿಗಳಾಗಿವೆ ಮತ್ತು ವಿಶ್ವದ ಎಲ್ಲ ಮಹಿಳಾ ಶಕ್ತಿಯಲ್ಲಿಯೂ ಆಕೆ ಪ್ರತಿಫಲಿಸಿದ್ದಾಳೆ. ನಮ್ಮ ಮಹಿಳಾ ಶಕ್ತಿಗೆ ಸಮರ್ಪಿತವಾಗಲಿರುವ ಉಪಕ್ರಮವೊಂದನ್ನು ನಾನು ಕೈಗೊಳ್ಳಲಿದ್ದೇನೆ. ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಒಂದು ದಿನದ ಮಟ್ಟಿಗೆ ಕೆಲವು ಸ್ಫೂರ್ತಿದಾಯಕ ಮಹಿಳೆಯರಿಗೆ ಹಸ್ತಾಂತರಿಸಲಿದ್ದೇನೆ.
► ಇತ್ತೀಚಿಗೆ ಪ್ಯಾರಿಸ್‌ನಲ್ಲಿ ನಡೆದ ಬೃಹತ್ ಕೃತಕ ಬುದ್ಧಿಮತ್ತೆ(ಎಐ) ಸಮ್ಮೇಳನದಲ್ಲಿ ನಾನು ಭಾಗವಹಿಸಿದ್ದೆ. ಅಲ್ಲಿ ಜಗತ್ತು ಈ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ಪ್ರಶಂಸಿಸಿತ್ತು. ಇತ್ತೀಚಿಗೆ ತೆಲಂಗಾಣದ ಆದಿಲಾಬಾದ್‌ನ ಶಾಲಾಶಿಕ್ಷಕ ಥೋಡಸಂ ಕೈಲಾಷ್ ಅವರು ನಮ್ಮ ಬುಡಕಟ್ಟು ಭಾಷೆಗಳನ್ನು ಸಂರಕ್ಷಿಸಲು ನಮಗೆ ನೆರವಾಗಿದ್ದಾರೆ. ಎಐ ಟೂಲ್‌ಗಳನ್ನು ಬಳಸಿ ಅವರು ಕೊಲಾಮಿ ಭಾಷೆಯಲ್ಲಿ ಗೀತೆಯೊಂದನ್ನು ಸಂಯೋಜಿಸಿದ್ದಾರೆ. ಅದು ಬಾಹ್ಯಾಕಾಶ ಕ್ಷೇತ್ರವಾಗಿರಲಿ ಅಥವಾ ಎಐ ಆಗಿರಲಿ,ನಮ್ಮ ಯುವಜನರ ಹೆಚುತ್ತಿರುವ ಪಾಲುದಾರಿಕೆಯು ನವಕ್ರಾಂತಿಯೊಂದನ್ನು ತಂದಿದೆ.
► ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ದೇಶಾದ್ಯಂತದ 11,000ಕ್ಕೂ ಹೆಚ್ಚು ಅತ್ಲೀಟ್‌ಗಳು ಅದ್ಭುತ ಪ್ರದರ್ಶನವನ್ನು ನೀಡಿದ್ದರೆ. ಈ ಕಾರ್ಯಕ್ರಮವು ದೇವಭೂಮಿಯ ಹೊಸ ರೂಪವನ್ನು ಪ್ರಸ್ತುತ ಪಡಿಸಿದೆ. ಉತ್ತರಾಖಂಡವು ಈಗ ದೇಶದಲ್ಲಿ ಪ್ರಬಲ ಕ್ರೀಡಾ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಇದು ಕ್ರೀಡೆಯ ತಾಕತ್ತು,ಅದು ವ್ಯಕ್ತಿಗಳನ್ನು,ಸಮುದಾಯಗಳನ್ನು,ಇಡೀ ರಾಜ್ಯವನ್ನು ಪರಿವರ್ತಿಸುತ್ತದೆ. ಅದು ಭವಿಷ್ಯದ ಪೀಳಿಗೆಗಳಿಗೆ ಸ್ಫೂರ್ತಿಯನ್ನು ನೀಡುತ್ತದೆ ಮತ್ತು ಶ್ರೇಷ್ಠತೆಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಈ ಕೀಡೆಗಳಲ್ಲಿ ಗರಿಷ್ಠ ಚಿನ್ನದ ಪದಕಗಳನ್ನು ಗೆದ್ದಿರುವ ಸಶಸ್ತ್ರಪಡೆಗಳ ತಂಡಕ್ಕೆ ನನ್ನ ಅಭಿನಂದನೆಗಳು.
► ಪ್ರತಿ ವರ್ಷ ನಾವು ನಡೆಸುವ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮವು ಈಗ ಹೆಚ್ಚೆಚ್ಚು ಸಾಂಸ್ಥಿಕಗೊಳ್ಳುತ್ತಿರುವುದು ನನಗೆ ಖುಷಿ ನೀಡಿದೆ. ಅನೇಕ ಹೊಸ ತಜ್ಞರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
► ಕರ್ನಾಟಕದ ಬಿಆರ್‌ಟಿ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ. ಇದರ ಬಹುಪಾಲು ಹೆಗ್ಗಳಿಕೆ ಹುಲಿಗಳನ್ನು ಪೂಜಿಸುವ ಸೋಲಿಗರಿಗೆ ಸೇರುತ್ತದೆ. ಅವರಿಂದಾಗಿ ಈ ಪ್ರದೇಶದಲ್ಲಿ ಮಾನವ-ಪ್ರಾಣಿ ಸಂಘರ್ಷ ಬಹುತೇಕ ಅಂತ್ಯಗೊಂಡಿದೆ. ಇದೇ ರೀತಿ ಗುಜರಾತಿನ ಗಿರ್‌ನಲ್ಲಿ ಏಷಿಯಾಟಿಕ್ ಸಿಂಹಗಳ ರಕ್ಷಣೆಯಲ್ಲಿ ಸ್ಥಳೀಯ ಜನರು ನಿರ್ಣಾಯಕ ಪಾತ್ರವನ್ನು ಹೊಂದಿದ್ದಾರೆ. ಈ ಸಮರ್ಪಿತ ಪ್ರಯತ್ನಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಹುಲಿಗಳು, ಚಿರತೆಗಳು, ಏಷ್ಯಾಟಿಕ್ ಸಿಂಹಗಳು,ಖಡ್ಗಮೃಗಗಳು ಮತ್ತು ಜೌಗು ಜಿಂಕೆಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ.