×
Ad

ಮನ್ ಕಿ ಬಾತ್ | ಬಾಹ್ಯಾಕಾಶ ಕ್ಷೇತ್ರದಲ್ಲಿ ನವೋದ್ಯಮಗಳು ವೇಗವಾಗಿ ತಲೆಯೆತ್ತುತ್ತಿವೆ,ಈಗ ಸಂಖ್ಯೆ 200 ದಾಟಿದೆ: ಪ್ರಧಾನಿ

Update: 2025-07-27 20:08 IST

 ನರೇಂದ್ರ ಮೋದಿ | PTI

ಹೊಸದಿಲ್ಲಿ,ಜು.27: ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ಯಶಸ್ವಿ ಅಂತರಿಕ್ಷ ಯಾನವನ್ನು ರವಿವಾರ ತನ್ನ ಮಾಸಿಕ ‘ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಭಾರತದಾದ್ಯಂತ ಮಕ್ಕಳನ್ನು ಬಾಹ್ಯಾಕಾಶ ಕುರಿತು ಹೊಸ ಕುತೂಹಲದ ಅಲೆಯು ಆವರಿಸಿದೆ ಎಂದು ಹೇಳಿದರು. 200ಕ್ಕೂ ಅಧಿಕ ನವೋದ್ಯಮಗಳು ಸ್ಥಾಪನೆಯಾಗುವುದರೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಅವರು ಎತ್ತಿ ತೋರಿಸಿದರು.

‘ವಿಕಸಿತ ಭಾರತ’ಕ್ಕೆ ಮಾರ್ಗವು ಸ್ವಾವಲಂಬನೆಯೊಂದಿಗೆ ಸುಗಮಗೊಂಡಿದೆ ಮತ್ತು ‘ವೋಕಲ್ ಫಾರ್ ಲೋಕಲ್’ ಆತ್ಮನಿರ್ಭರ ಭಾರತ(ಸ್ವಾವಲಂಬಿ ಭಾರತ)ಕ್ಕೆ ಸುಭದ್ರ ಬುನಾದಿಯಾಗಿದೆ ಎಂದು ಮೋದಿ ಒತ್ತಿ ಹೇಳಿದರು.

ಇತ್ತೀಚಿಗೆ ಶುಭಾಂಶು ಶುಕ್ಲಾ ಬಾಹ್ಯಾಕಾಶದಿಂದ ಮರಳಿದ ಬಗ್ಗೆ ದೇಶದಲ್ಲಿ ವ್ಯಾಪಕ ಚರ್ಚೆಗಳು ನಡೆದಿದ್ದವು. ಶುಭಾಂಶು ಶುಕ್ಲಾರ ಸುರಕ್ಷಿತ ಆಗಮನದಿಂದಾಗಿ ಜನರು ಸಂಭ್ರಮಿಸಿದ್ದರು ಮತ್ತು ಪ್ರತಿಯೊಂದೂ ಹೃದಯದಲ್ಲಿಯೂ ಸಂತಸದ ಅಲೆ ಹರಿದಿತ್ತು. ಇಡೀ ದೇಶವು ಹೆಮ್ಮೆಯಿಂದ ಬೀಗಿತ್ತು ಎಂದರು.

ಇದರ ಬೆನ್ನಲ್ಲೇ ದೇಶಾದ್ಯಂತ ಮಕ್ಕಳಲ್ಲಿ ಬಾಹ್ಯಾಕಾಶದ ಕುರಿತು ಹೊಸ ಕುತೂಹಲ ಮೂಡುತ್ತಿದೆ ಎಂದು ಪುನರುಚ್ಚರಿಸಿದ ಮೋದಿ,ದೇಶದಲ್ಲಿ ಬಾಹ್ಯಾಕಾಶ ಸಂಬಂಧಿತ ನವೋದ್ಯಮಗಳು ವೇಗವಾಗಿ ತಲೆಯೆತ್ತುತ್ತಿವೆ. ಐದು ವರ್ಷಗಳ ಹಿಂದೆ 50ಕ್ಕಿಂತ ಕಡಿಮೆ ನವೋದ್ಯಮಗಳಿದ್ದವು. ಇಂದು ಬಾಹ್ಯಾಕಾಶ ಕ್ಷೇತ್ರವೊಂದರಲ್ಲೇ 200ಕ್ಕೂ ಅಧಿಕ ನವೋದ್ಯಮಗಳಿವೆ ಎಂದು ಬೆಟ್ಟು ಮಾಡಿದರು.

ಆ.23ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುವುದು ಎಂದು ಹೇಳಿದ ಅವರು, ಆ ದಿನವನ್ನು ಹೇಗೆ ಆಚರಿಸಬೇಕು ಎನ್ನುವುದರ ಕುರಿತು ಸಲಹೆಗಳನ್ನು ಆಹ್ವಾನಿಸಿದರು. ರಸಾಯನ ಶಾಸ್ತ್ರದಿಂದ ಹಿಡಿದು ಗಣಿತ ಒಲಿಂಪಿಯಾಡ್‌ ಗಳವರೆಗೆ ಭಾರತೀಯ ಯುವಜನರು ಶ್ರೇಷ್ಠತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಅವರು ಎತ್ತಿ ತೋರಿಸಿದರು.

ಶೌರ್ಯ ಮತ್ತು ದೂರದೃಷ್ಟಿಯ ಸಂಕೇತಗಳಾದ 12 ಮರಾಠಾ ಕೋಟೆಗಳನ್ನು ಯುನೆಸ್ಕೋ ವಿಶ್ವ ಪರಂಪರೆ ತಾಣಗಳನ್ನಾಗಿ ಘೋಷಿಸಲಾಗಿದ್ದು,ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಘಳಿಗೆಯಾಗಿದೆ ಎಂದು ಮೋದಿ ಬಣ್ಣಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News