34.13 ಕೋಟಿ ರೂ. ಆದಾಯ ಗಳಿಸಿದ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’
ನರೇಂದ್ರ ಮೋದಿ | PTI
ಹೊಸದಿಲ್ಲಿ,ಆ.8: ಪ್ರಧಾನಿ ನರೇಂದ್ರ ಮೋದಿಯವರ ಬಾನುಲಿ ಭಾಷಣ ಕಾರ್ಯಕ್ರಮ ‘ಮನ್ ಕಿಬಾತ್’ ಆರಂಭವಾದಾಗಿನಿಂದ ಅದು ಒಟ್ಟು 34.13 ಕೋಟಿ ರೂ. ಆದಾಯವನ್ನು ಗಳಿಸಿದೆಯೆಂದು ಕೇಂದ್ರ ಸರಕಾರವು ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.
ಆಕಾಶವಾಣಿ ನಿರ್ಮಿಸುವ ‘ಮನ್ ಕಿಬಾತ್’ ಕಾರ್ಯಕ್ರಮವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಅಸ್ತಿತ್ವದಲ್ಲಿರುವ ಆಂತರಿಕ ಸಂಪನ್ಮೂಲಗಳಿಂದಲೇ ನಿರ್ಮಿಸಲಾಗುತ್ತಿದೆ. ಅದು ಆರಂಭವಾದಾಗಿನಿಂದ ಒಟ್ಟು 34.13 ಕೋಟಿ ರೂ. ಆದಾಯವನ್ನು ತಂದುಕೊಟ್ಟಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆಯ ಸಚಿವ ಎಲ್.ಮುರುಗನ್ ತಿಳಿಸಿದ್ದಾರೆ.
‘ಮನ್ ಕಿ ಬಾತ್’ ಕಾರ್ಯಕ್ರಮವನ್ನು 2014ರ ಆಕ್ಟೋಬರ್ 3ರಂದು ಆರಂಭಿಸಲಾಗಿತ್ತು. ಆಕಾಶವಾಣಿ (ಆಲ್ ಇಂಡಿಯಾ ರೇಡಿಯೊ)ಯು ತನ್ನ ರಾಷ್ಟೀಯ ಹಾಗೂ ಪ್ರಾದೇಶಿಕ ಜಾಲಗಳ ಮೂಲಕ ಪ್ರಸಾರ ಮಾಡುತ್ತಿರುವ ಈ ಬಾನುಲಿ ಕಾರ್ಯಕ್ರಮವು ಬಹುದೊಡ್ಡ ಶ್ರೋತೃವರ್ಗವನ್ನು ತಲುಪಿದೆ. ಸ್ಥಳೀಯ ಭಾಷಾ ಶ್ರೋತೃಗಳನ್ನು ತಲುಪಲು ಮನ್ ಕಿ ಬಾತ್ ನ ಪ್ರಾದೇಶಿಕ ಭಾಷಾ ಆವೃತ್ತಿಗಳನ್ನು ಕೂಡಾ ರೂಪಿಸಲಾಗಿದೆ ಎಂದರು.
ಇದೇ ವೇಳೆ ಮನ್ ಕಿ ಬಾತ್ ಕಾರ್ಯಕ್ರಮವು ವಿವಿಧ ದೂರದರ್ಶನ ಹಾಗೂ ಪ್ರಾದೇಶಿಕ ಭಾಷಾ ವಾಹಿನಿಗಳಲ್ಲಿಯೂ ಭಿತ್ತರಗೊಳ್ಳುತ್ತಿದೆಯೆಂದು ಸಚಿವರು ತಿಳಿಸಿದರು. ದೂರದರ್ಶನ ವಾಹಿನಿಗಳು, ಡಿಡಿ ಉಚಿತ ಡಿಶ್ ನ 48 ಆಕಾಶವಾಣಿ ರೇಡಿಯೊ ಚಾನೆಲ್ ಗಳು ಹಾಗೂ 92 ಖಾಸಗಿ ಟಿವಿ ವಾಹಿನಿಗಳ ಮೂಲಕ ‘ಮನ್ ಕಿ ಬಾತ್’ ಕಾರ್ಯಕ್ರಮವು ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳು ಸೇರಿದಂತೆ ದೇಶಾದ್ಯಂತ ಲಭ್ಯವಾಗುತ್ತಿದೆ ಎಂದು ಸಚಿವರು ಹೇಳಿದರು.
ಪಿಎಂಓ ಇಂಡಿಯಾ, ಏರ್ ಅಥವಾ ಪ್ರಸಾರ ಭಾರತಿಯ ಓಟಿಟಿ ವೇದಿಕೆ ವೇವ್ಸ್ ಹಾಗೂ 260ಕ್ಕೂ ಆಕಾಶವಾಣಿ ಚಾನೆಲ್ ಗಳನ್ನು ನೀಡುವ ನ್ಯೂಸ್ ಆನ್ ಏರ್ ಆ್ಯಪ್ ನಲ್ಲೂ ಮನ್ ಕಿ ಬಾತ್ ಆಲಿಸಬಹುದಾಗಿದೆ ಎಂದು ಮುರುಗನ್ ತಿಳಿಸಿದ್ದಾರೆ.