×
Ad

ರಾಜ್ಯಸಭೆಯಲ್ಲಿ ಎಸ್‌ಐಆರ್ ವಿರುದ್ಧ ಪ್ರತಿಭಟನಾನಿರತ ಪ್ರತಿಪಕ್ಷ ಸದಸ್ಯರನ್ನು ತಡೆದ ಮಾರ್ಷಲ್‌ ಗಳು

Update: 2025-08-01 20:41 IST

PC : PTI 

ಹೊಸದಿಲ್ಲಿ,ಆ.1: ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರಿಂದ ರಾಜ್ಯಸಭೆಯು ಶುಕ್ರವಾರ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿಲ್ಲ. ಸದನದ ಬಾವಿಗೆ ನುಗ್ಗಲು ಯತ್ನಿಸಿದ್ದ ಪ್ರತಿಪಕ್ಷ ಸದಸ್ಯರನ್ನು ಮಾರ್ಷಲ್‌ ಗಳು ತಡೆದಿದ್ದು, ಇದನ್ನು ಆಕ್ಷೇಪಿಸಿ ಸದನ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಉಪಸಭಾಪತಿ ಹರಿವಂಶ ಅವರಿಗೆ ಲಿಖಿತ ದೂರನ್ನು ಸಲ್ಲಿಸಿದರು.

ಬೆಳಿಗ್ಗೆ 11 ಗಂಟೆಗೆ ದಿನದ ಕಲಾಪ ಪಟ್ಟಿಯನ್ನು ಮಂಡಿಸಿದ ಬಳಿಕ ಪೀಠದಲ್ಲಿದ್ದ ಹರಿವಂಶ ಅವರು ಎಸ್‌ಐಆರ್ ಕುರಿತು ಚರ್ಚೆಗೆ ಆಗ್ರಹಿಸಿ 21 ಸೇರಿದಂತೆ 30 ನಿಲುವಳಿ ಸೂಚನೆಗಳನ್ನು ತಾನು ಸ್ವೀಕರಿಸಿದ್ದಾಗಿ ತಿಳಿಸಿದರು. ಪೂರ್ವ ನಿದರ್ಶನಗಳನ್ನು ಉಲ್ಲೇಖಿಸಿ ಅವರು ನೋಟಿಸ್‌ ಗಳನ್ನು ತಿರಸ್ಕರಿಸಿದ್ದು ಪ್ರತಿಪಕ್ಷಗಳಿಂದ ಗದ್ದಲಕ್ಕೆ ಕಾರಣವಾಯಿತು.

ಎಸ್‌ಐಆರ್ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಹಿರಿಯ ಆರ್‌ಜೆಡಿ ನಾಯಕ ಮನೋಜಕುಮಾರ ಝಾ ಆಗ್ರಹಿಸಿದರಾದರೂ ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ ಮತ್ತು ಈ ವಿಷಯವು ವಿಚಾರಣಾಧೀನವಾಗಿದೆ. ಹೀಗಾಗಿ ತಾನು ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ತಮ್ಮ ಆಸನಗಳಿಗೆ ಮರಳುವಂತೆ ಅವರು ಪ್ರತಿಭಟನಾನಿರತ ಸದಸ್ಯರನ್ನು ಆಗ್ರಹಿಸಿದರಾದರೂ ಪ್ರತಿಭಟನೆ ಮುಂದುವರಿದಾಗ ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು.

ಸದನವು ಮರುಸಮಾವೇಶಗೊಂಡಾಗಲೂ ಪ್ರತಿಭಟನೆ ಮುಂದುವರಿದಿದ್ದು,ಟಿಎಂಸಿಯ ರಾಜ್ಯಸಭಾ ಸಂಸದೀಯ ಪಕ್ಷದ ನಾಯಕ ಡೆರೆಕ್ ಒ‘ಬ್ರಿಯೆನ್,ಡಿಎಂಕೆಯ ಸದನ ನಾಯಕ ತಿರುಚಿ ಶಿವ ಮತ್ತು ಆಪ್‌ ನ ಸದನ ನಾಯಕ ಸಂಜಯ ಸಿಂಗ್ ಅವರು ಸದನದ ಬಾವಿಗೆ ನುಗ್ಗಲು ಪ್ರಯತ್ನಿಸಿದಾಗ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದರು. ಆದರೆ ಈ ಮೂವರು ಇತರ ಕೆಲವು ಸದಸ್ಯರೊಂದಿಗೆ ತಡೆಯನ್ನು ಭೇದಿಸಿ ಮುಂದೆ ಸಾಗಿದಾಗ, ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

►ಉಪಸಭಾಪತಿಗೆ ಖರ್ಗೆ ಪತ್ರ

ಇದರ ಬೆನ್ನಲ್ಲೇ ಖರ್ಗೆಯವರು ಸದಸ್ಯರು ಪ್ರಮುಖ ಸಾರ್ವಜನಿಕ ವಿಷಯಗಳನ್ನು ಎತ್ತುತ್ತಿರುವಾಗ ಭದ್ರತಾ ಸಿಬ್ಬಂದಿಗಳಿಗೆ ಸದನದ ಬಾವಿಯನ್ನ ಪ್ರವೇಶಿಸಲು ಅವಕಾಶ ನೀಡದಂತೆ ಆಗ್ರಹಿಸಿ ಹರಿವಂಶ ಅವರಿಗೆ ಲಿಖಿತ ದೂರನ್ನು ಸಲ್ಲಿಸಿದರು.

ಸದಸ್ಯರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸುತ್ತಿದ್ದಾಗ ಸಿಐಎಸ್‌ಎಫ್ ಸಿಬ್ಬಂದಿಗಳು ಸದನದೊಳಗೆ ಧಾವಿಸುವಂತೆ ಮಾಡಿದ್ದನ್ನು ಕಂಡು ತನಗೆ ಆಘಾತದ ಜೊತೆಗೆ ಅಚ್ಚರಿಯೂ ಆಯಿತು ಎಂದು ಖರ್ಗೆ ತನ್ನ ದೂರಿನಲ್ಲಿ ಹೇಳಿದ್ದಾರೆ.

ಪ್ರತಿಪಕ್ಷಗಳ ಪರವಾಗಿ ಬರೆದ ದೂರಿನಲ್ಲಿ ಖರ್ಗೆ,‘ನಾವು ನಿನ್ನೆ ಇದನ್ನು ನೋಡಿದ್ದೆವು,ಇಂದೂ ಸಹ ಅದನ್ನು ನೋಡಿದ್ದೇವೆ. ನಮ್ಮ ಸಂಸತ್ತನ್ನು ಇಷ್ಟೊಂದು ಕೆಳಮಟ್ಟಕ್ಕೆ ಇಳಿಸಲಾಗಿದೆಯೇ? ಇದು ಅತ್ಯಂತ ಆಕ್ಷೇಪಾರ್ಹವಾಗಿದೆ ಮತ್ತು ನಾವು ಇದನ್ನು ಸ್ಪಷ್ಟವಾಗಿ ಖಂಡಿಸುತ್ತೇವೆ. ಭವಿಷ್ಯದಲ್ಲಿ ಸದಸ್ಯರು ಸಾರ್ವಜನಿಕ ಮಹತ್ವದ ವಿಷಯಗಳನ್ನು ಎತ್ತುತ್ತಿರುವಾಗ ಸಿಐಎಸ್‌ಎಫ್ ಸಿಬ್ಬಂದಿಗಳು ಸದನದ ಬಾವಿಗೆ ನುಗ್ಗುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ ’ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News