×
Ad

ಹಿಂಸಾತ್ಮಕ ಸ್ವರೂಪ ಪಡೆದ ಲಡಾಖ್ ಗೆ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ; ಬಿಜೆಪಿ ಕಚೇರಿಗೆ ಬೆಂಕಿ

ಅಶ್ರುವಾಯು ಶೆಲ್ ಸಿಡಿಸಿದ ಪೊಲೀಸರು

Update: 2025-09-24 14:49 IST

Screengrab:X/ANI

ಲೇಹ್: ಲಡಾಖ್ ಅಪೆಕ್ಸ್ ಬಾಡಿ (LAB) ನೇತೃತ್ವದಲ್ಲಿ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ ಬುಧವಾರ ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ನಗರದ ಬೀದಿಗಳಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದರು. ಹಲವು ವಾಹನಗಳು ಸುಟ್ಟಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.

ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ಆಡಳಿತವು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿರುವುದರಿಂದ ಪ್ರತಿಭಟನೆ ತೀವ್ರಗೊಂಡಿದೆ ಎಂದು LAB ಸಂಘಟಕರು ಆರೋಪಿಸಿದ್ದಾರೆ. ಸೆ.10ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 15 ಜನರಲ್ಲಿ ಇಬ್ಬರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇದಾದ ನಂತರ LAB ಯುವ ಘಟಕವು ಬಂದ್ ಮತ್ತು ಬೃಹತ್ ಪ್ರತಿಭಟನೆಗೆ ಕರೆ ನೀಡಿತು.

ಹವಾಮಾನ ಹೋರಾಟಗಾರ ಸೋನಮ್ ವಾಂಗ್‌ ಚುಕ್ ಸೇರಿದಂತೆ ಹಲವರು ಆಂದೋಲನದಲ್ಲಿ ಸಕ್ರಿಯರಾಗಿದ್ದಾರೆ. LAB ನಾಯಕರು ಲಡಾಖ್‌ಗೆ ರಾಜ್ಯದ ಮಾನ್ಯತೆ ನೀಡುವುದು ಮತ್ತು ಆರನೇ ಪರಿಚ್ಛೇದದಡಿಯಲ್ಲಿ ಸೇರಿಸುವ ಬೇಡಿಕೆ ಈಡೇರಿದಾಗ ಮಾತ್ರ ತಮ್ಮ ಹೋರಾಟವನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ.

ನಗರದ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ ದೃಶ್ಯಗಳ ವೀಡಿಯೊಗಳು ವೈರಲ್ ಆಗಿದ್ದು, ಆವರಣದಿಂದ ದಟ್ಟ ಹೊಗೆ ಎದ್ದಿರುವುದು ಕಂಡುಬಂದಿದೆ. ಪ್ರತಿಭಟನಾಕಾರರು ಪೊಲೀಸ್ ವ್ಯಾನ್‌ಗಳು ಸೇರಿ ಅನೇಕ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ ಪರಿಣಾಮ ಉದ್ವಿಗ್ನತೆ ಹೆಚ್ಚಾಯಿತು.

ಹಿಂಸಾಚಾರ ನಿಯಂತ್ರಣಕ್ಕೆ ತರಲು ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News