×
Ad

ನೇಪಾಳದಲ್ಲಿ ಯುವಜನರ ಬೃಹತ್ ಪ್ರತಿಭಟನೆ | ಹಿಂಸಾತ್ಮಕ ಘಟನೆಗಳಲ್ಲಿ ಕನಿಷ್ಠ 14 ಮೃತ್ಯು

Update: 2025-09-08 21:45 IST

PC : ANI 

ಕಠ್ಮಂಡು, ಸೆ. 8: ನೇಪಾಳ ಸರಕಾರದ ಭ್ರಷ್ಟಾಚಾರ ಮತ್ತು ಹಲವಾರು ಸಾಮಾಜಿಕ ಮಾಧ್ಯಮ ಆ್ಯಪ್‌ ಗಳ ಮೇಲೆ ಸರಕಾರ ಹೇರಿರುವ ನಿಷೇಧದ ವಿರುದ್ಧ ಸೋಮವಾರ ಕಠ್ಮಂಡುನಲ್ಲಿ ಯುವಜನರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ವೇಳೆ ಸಂಭವಿಸಿದ ಹಿಂಸಾಕೃತ್ಯಗಳಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಮತ್ತು ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಉದ್ರಿಕ್ತ ಪ್ರತಿಭಟನಕಾರರು ಕರ್ಫ್ಯೂ ನಿರ್ಬಂಧಗಳನ್ನು ಉಲ್ಲಂಘಿಸಿ ಸಂಸತ್ ಸಮೀಪದ ನಿರ್ಬಂಧಿತ ವಲಯಗಳಿಗೆ ಪ್ರವೇಶಿಸಿದ ಬಳಿಕ ನೇಪಾಳ ರಾಜಧಾನಿಯಲ್ಲಿ ಸೇನೆಯನ್ನು ನಿಯೋಜಿಸಲಾಯಿತು.

ಪ್ರತಿಭಟನೆಯ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮ ಆ್ಯಪ್‌ಗಳ ಮೇಲೆ ವಿಧಿಸಲಾಗಿರುವ ನಿಷೇಧವನ್ನು ತೆರವುಗೊಳಿಸಲು ಸರಕಾರ ಮುಂದಾಗಿದೆ ಎನ್ನಲಾಗಿದೆ.

ಪ್ರತಿಭಟನಾಕಾರರು ಪೊಲೀಸರತ್ತ ಮರದ ಗೆಲ್ಲುಗಳು ಮತ್ತು ನೀರಿನ ಬಾಟಲಿಗಳನ್ನು ಎಸೆದರು ಹಾಗೂ ಸರಕಾರ ವಿರೋಧಿ ಘೋಷಣೆಗಳನ್ನು ಕೂಗಿದರು. ಆಗ ಪೊಲೀಸರು ಜಲಫಿರಂಗಿ ಹರಿಸಿದರು, ಅಶ್ರುವಾಯು ಶೆಲ್‌ ಗಳನ್ನು ಸಿಡಿಸಿದರು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದರು. ಕೆಲವು ಪ್ರತಿಭಟನಾಕಾರರು ಸಂಸತ್ ಆವರಣದ ಒಳಗೆ ಪ್ರವೇಶಿಸುವಲ್ಲಿಯೂ ಯಶಸ್ವಿಯಾದರು.

ಉದ್ವಿಗ್ನತೆ ಮುಂದುವರಿದಾಗ ಕಠ್ಮಂಡು ಜಿಲ್ಲಾ ಆಡಳಿತ ಕಚೇರಿಯು ಕರ್ಫ್ಯೂವನ್ನು ವಿಸ್ತರಿಸಿತು. ಮೊದಲು ಕರ್ಫ್ಯೂವನ್ನು ರಾಜಧಾನಿಯ ಬಾನೇಶ್ವರ್ ಪ್ರದೇಶದಲ್ಲಿ ಹೇರಲಾಗಿತ್ತು. ಬಳಿಕ ಅದನ್ನು ಅಧ್ಯಕ್ಷರ ನಿವಾಸ (ಶೀತಲ ನಿವಾಸ), ಲಾಯಿನ್‌ ಚಾರ್‌ ನಲ್ಲಿರುವ ಉಪಾಧ್ಯಕ್ಷರ ನಿವಾಸ, ಸಿಂಘ ದರ್ಬಾರ್‌ನ ಎಲ್ಲಾ ಬದಿಗಳು, ಬಲುವತರ್‌ನಲ್ಲಿರುವ ಪ್ರಧಾನಿ ನಿವಾಸ ಹಾಗೂ ಸಮೀಪದ ಪ್ರದೇಶಗಳು ಸೇರಿದಂತೆ ಹಲವಾರು ಅತಿ ಭದ್ರತಾ ವಲಯಗಳಿಗೆ ವಿಸ್ತರಿಸಲಾಯಿತು.

ಪ್ರತಿಭಟನೆಯು ದೇಶದ ವಿವಿಧ ಭಾಗಗಳಿಗೆ ಹಬ್ಬಿದೆ. ನೇಪಾಳ ಪ್ರಧಾನಿ ಕೆ.ಪಿ. ಒಲಿ, ಈ ವಿಷಯದ ಬಗ್ಗೆ ತುರ್ತು ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ.

ಯಾಕೆ ಯುವಜನರ ಪ್ರತಿಭಟನೆ?

ನೇಪಾಳ ಸರಕಾರವು ನೋಂದಾಯಿಸಲ್ಪಡದ 26 ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸಿದ ಬಳಿಕ, ಫೇಸ್‌ಬುಕ್, ಯೂಟ್ಯೂಬ್ ಮತ್ತು ಎಕ್ಸ್ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮಗಳು ಶುಕ್ರವಾರದಿಂದ ನಾಪತ್ತೆಯಾಗಿದ್ದವು. ಇದರಿಂದ ಜನರು ಗೊಂದಲಕ್ಕೊಳಗಾಗಿದ್ದರು ಮತ್ತು ಆಕ್ರೋಶಗೊಂಡಿದ್ದರು.

ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್ ಮುಂತಾದ ಜನಪ್ರಿಯ ವೇದಿಕೆಗಳಿಗೆ ನೇಪಾಳದಲ್ಲಿ ಲಕ್ಷಾಂತರ ಬಳಕೆದಾರರಿದ್ದಾರೆ. ಅವರು ಮನರಂಜನೆ, ಸುದ್ದಿ ಮತ್ತು ವ್ಯಾಪಾರಕ್ಕಾಗಿ ಈ ಸಾಮಾಜಿಕ ಮಾಧ್ಯಮಗಳನ್ನು ಅವಲಂಬಿಸಿದ್ದಾರೆ.

ಸರಕಾರದ ಈ ಕ್ರಮವು ಜನರನ್ನು, ಅದರಲ್ಲೂ ಮುಖ್ಯವಾಗಿ ಯುವಜನರನ್ನು ರೊಚ್ಚಿಗೆಬ್ಬಿಸಿತು. ಹಾಸುಹೊಕ್ಕಾಗಿರುವ ಭ್ರಷ್ಟಾಚಾರವನ್ನು ನಿವಾರಿಸಲು ವಿಫಲವಾಗಿರುವ ಸರಕಾರವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಜನರು ಭಾವಿಸಿದರು.

ಸೋಮವಾರ, ಸಾಮಾಜಿಕ ಮಾಧ್ಯಮಗಳ ಮೇಲೆ ವಿಧಿಸಲಾಗಿರುವ ನಿಷೇಧವನ್ನು ತೆಗೆಯಬೇಕು ಮತ್ತು ವ್ಯಾಪಕವಾಗಿರುವ ಭ್ರಚ್ಟಾಚಾರದ ಸಂಸ್ಕೃತಿಯನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿ ಸಾವಿರಾರು ಯುವಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News