×
Ad

ಚೆನ್ನೈ ಕಸ್ಟಮ್ಸ್ ಲಂಚ ಹಗರಣವನ್ನು ಬಹಿರಂಗಪಡಿಸಿದ ʼವಿನ್‌ಟ್ರಾಕ್ʼ ಸಂಸ್ಥಾಪಕ ಪ್ರವೀಣ್ ಗಣೇಶನ್ ಯಾರು?

Update: 2025-10-06 13:09 IST

ವಿಂಟ್ರ್ಯಾಕ್ ಇಂಕ್ ಸಂಸ್ಥಾಪಕ ಪ್ರವೀಣ್ ಗಣೇಶನ್ (Screengrab:X/@wintrackinc)

ಚೆನ್ನೈ: ಸರಕು ಬಿಟ್ಟುಕೊಡಲು ಪ್ರತಿ ಬಾರಿಯೂ ಲಂಚ ಕೇಳುತ್ತಿದ್ದ ಚೆನ್ನೈನ ಕಸ್ಟಮ್ಸ್ ಇಲಾಖೆಯ ಮೇಲೆ ತಮಿಳುನಾಡಿನ ಯುವ ಉದ್ಯಮಿ ಮತ್ತು ವಿಂಟ್ರ್ಯಾಕ್ ಇಂಕ್ ಸಂಸ್ಥಾಪಕ ಪ್ರವೀಣ್ ಗಣೇಶನ್ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ತಮ್ಮ ಆರೋಪಗಳಿಗೆ ಅವರು ನೀಡಿರುವ ಪುರಾವೆಗಳು ಇದೀಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ವಿಂಟ್ರ್ಯಾಕ್ ಇಂಕ್ ಕಳೆದ ವಾರ ಭಾರತದಲ್ಲಿನ ತನ್ನ ಆಮದು ಮತ್ತು ರಫ್ತು ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಘೋಷಿಸಿದ ಬಳಿಕ ಈ ವಿಷಯ ಚರ್ಚೆಗೆ ಕಾರಣವಾಯಿತು.

ಈ ರೀತಿ ಆಮದು ವ್ಯವಹಾರ ಮಾಡುತ್ತಿರುವವರು ಕಸ್ಟಮ್ಸ್ ಅಧಿಕಾರಿಗಳಿಂದ ಎದುರಿಸುತ್ತಿರುವ ಕಿರುಕುಳದ ಬಗ್ಗೆ ಮುಂದೆ ಬಂದು ದೂರು ನೀಡಬೇಕು ಎಂದು ಅವರು ಇತರ ಉದ್ಯಮಿಗಳನ್ನೂ ಆಗ್ರಹಿಸಿದ್ದಾರೆ.

“ಕಳೆದ 45 ದಿನಗಳಿಂದ ಚೆನ್ನೈ ಕಸ್ಟಮ್ಸ್ ಅಧಿಕಾರಿಗಳು ನಮ್ಮ ಕಂಪೆನಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಅವರ ಲಂಚ ಕೇಳುವ ಚಾಳಿಯನ್ನು ಎರಡು ಬಾರಿ ಬಹಿರಂಗಪಡಿಸಿದ ನಂತರ ಅವರು ನಮ್ಮ ಮೇಲೆ ಪ್ರತೀಕಾರ ತೀರಿಸಿಕೊಂಡು, ಭಾರತದಲ್ಲಿ ನಮ್ಮ ವ್ಯವಹಾರಕ್ಕೆ ಹಿನ್ನಡೆಯಾಗುವಂತೆ ಮಾಡಿದ್ದಾರೆ,” ಎಂದು ಕಂಪೆನಿಯು ಅಕ್ಟೋಬರ್ 1ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಈ ಹೇಳಿಕೆಯ ನಂತರ ಕಂದಾಯ ಇಲಾಖೆ ಅಧಿಕೃತ ತನಿಖೆಯನ್ನು ಪ್ರಾರಂಭಿಸಿದೆ.

ಪ್ರವೀಣ್ ಗಣೇಶನ್ ಅವರು ತಮ್ಮ ವೈಯಕ್ತಿಕ X ಖಾತೆಯಲ್ಲಿ ಪ್ರಕಟಿಸಿದ ವೀಡಿಯೊದಲ್ಲಿ, ಈ ವರ್ಷದ ಜನವರಿಯಲ್ಲಿ ತಮ್ಮ ಕಂಪೆನಿಯ ಲೈಂಗಿಕ ಸ್ವಾಸ್ಥ್ಯ ವಸ್ತುಗಳನ್ನು ಒಳಗೊಂಡಿದ್ದ ಸರಕು ಸಾಗಣೆಯನ್ನು ಬಿಡುಗಡೆ ಮಾಡಲು 8 ಲಕ್ಷ ರೂಪಾಯಿ ಲಂಚ ನೀಡುವಂತೆ ಕೇಳಲಾಗಿತ್ತು ಎಂದು ಹೇಳಿದ್ದಾರೆ.

ಅವರು ಆ ಸಂಭಾಷಣೆಯ ಧ್ವನಿಮುದ್ರಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಬಳಿಕ ಅವರ ಸರಕು ಸಾಗಣೆಯನ್ನು ಬಿಡುಗಡೆ ಮಾಡಲಾಯಿತು. ಕೆಲ ತಿಂಗಳುಗಳ ನಂತರ, ಮೇ ತಿಂಗಳಲ್ಲಿ ಮತ್ತೊಂದು ಸರಕು ಸಾಗಣೆಯನ್ನು ತಡೆಹಿಡಿಯಲಾಯಿತು ಈ ಬಾರಿ ಅಧಿಕಾರಿಗಳು 5 ಲಕ್ಷ ರೂಪಾಯಿ ಲಂಚ ಕೇಳಿದರು ಎಂದು ಅವರು ಹೇಳಿದ್ದಾರೆ.

ಗಣೇಶನ್ ಪ್ರಕಾರ, ಅವರು ಅಧಿಕಾರಿಗಳಿಗೆ ಹಣ ನೀಡದೆ ಮೌಲ್ಯಮಾಪನ ಮತ್ತು ಸ್ಪೆಷಲ್ ಇಂಟಲಿಜೆನ್ಸ್ ಅಂಡ್ ಇನ್ವೆಸ್ಟಿಗೇಷನ್ ಬ್ರಾಂಚ್ (SIB) ವಿಭಾಗಕ್ಕೆ 3 ಲಕ್ಷ ರೂಪಾಯಿ ಪಾವತಿಸಿದರು.

ಈ ಘಟನೆಗಳು ಆಗಸ್ಟ್ ವರೆಗೆ ಪುನರಾವರ್ತಿತವಾಗುತ್ತಿತ್ತು, ಬಳಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಗಣೇಶನ್ ಹೇಳಿದ್ದಾರೆ.

ಚೆನ್ನೈ ಕಸ್ಟಮ್ಸ್ ಇಲಾಖೆ ಈ ಆರೋಪಗಳನ್ನು ನಿರಾಕರಿಸಿದೆ. ಗಣೇಶನ್ ವಿರುದ್ಧವೇ ಕೆಲವು ಆರೋಪಗಳನ್ನು ಹೊರಿಸಿದೆ. ಆದರೆ ಗಣೇಶನ್ ತಮ್ಮ ಹೇಳಿಕೆಗಳನ್ನು ಹಿಂಪಡೆಯದೇ, “ನಮ್ಮ ವ್ಯವಹಾರ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ತಿರುಪ್ಪೂರಿನ ಮೂಲದ ಪ್ರವೀಣ್ ಗಣೇಶನ್ ಅವರು 2014ರಲ್ಲಿ ಪ್ರಾರಂಭವಾದ ಭಾರತದ ಮೊದಲ ದೈಹಿಕ ಲೈಂಗಿಕ ಸ್ವಾಸ್ಥ್ಯ ಮಳಿಗೆ KamaKart.com ನ ಸ್ಥಾಪಕರಾಗಿದ್ದಾರೆ. ಅವರು Wintrack ನ ಮುಖ್ಯಸ್ಥರಾಗಿದ್ದು, ವಿದೇಶಿ ವ್ಯಾಪಾರ ಕಂಪೆನಿ Dongguan Sgengdao Import and export co Ltd ನ ನಿರ್ದೇಶಕರೂ ಆಗಿದ್ದಾರೆ.

ಅವರು ಸಾಕುಪ್ರಾಣಿ ಉತ್ಪನ್ನಗಳ ಆನ್‌ಲೈನ್ ಮಳಿಗೆ The Zoo Mart ನ ಸಹ-ಸ್ಥಾಪಕರಾಗಿದ್ದು, ಚೀನಾ ಸೋರ್ಸಿಂಗ್ ತಜ್ಞ ಹಾಗೂ ಗಡಿಯಾಚೆಗಿನ ಲಾಜಿಸ್ಟಿಕ್ಸ್ ಪೂರೈಕೆದಾರರಾಗಿದ್ದಾರೆ.

ಗಣೇಶನ್ ಅವರು ಮ್ಯಾಂಚೆಸ್ಟರ್ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಭಾರತಿಯಾರ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News