ಆಗಸದಲ್ಲಿ ಭೀತಿ: ಬಡಿಗೆ, ಕಲ್ಲುಗಳಿಂದ ಡ್ರೋನ್ ಬೆನ್ನಟ್ಟುವ ಗ್ರಾಮಸ್ಥರು!
ಬಿಜೋರ್: ಉತ್ತರ ಪ್ರದೇಶದ ಬಲೂಂದರ್ ಶಹರ್ ಜಿಲ್ಲಾ ಜೈಲಿನ ಪಕ್ಕ ಶುಕ್ರವಾರ ಮುಸ್ಸಂಜೆ ವೇಳೆಗೆ ಅತ್ಯಂತ ಕೆಳಮಟ್ಟದಲ್ಲಿ ಡ್ರೋನ್ ಹಾರಾಡುತ್ತಿತ್ತು. ಹಲವು ಸೆಕೆಂಡ್ ಗಳ ಕಾಲ ಅಡ್ಡಾಡಿ ತನ್ನ ಕೋನವನ್ನು ಬದಲಿಸಿ ಹಿಂದಕ್ಕೆ ಚಲಿಸಿತು. ಇದಾದ ಕೆಲವೇ ಗಂಟೆಗಳಲ್ಲಿ ಡ್ರೋನ್ ನಲ್ಲಿ ಸೆರೆಹಿಡಿದ ಕಾಂಪೌಂಡಿನ ದೃಶ್ಯಾವಳಿ ಜಾಲತಾಣಗಳಲ್ಲಿ ಹರಿದಾಡಿತು. ಶನಿವಾರ ಮುಂಜಾನೆ ವೇಳೆಗೆ ಪೈಲಟ್ ನನ್ನು ಬಂಧಿಸಲಾಯಿತು. ಡ್ರೋನ್ ವಶಪಡಿಸಿಕೊಳ್ಳಲಾಯಿತು. ಹಾರಾಟ ನಿಷೇಧ ಮತ್ತು ಛಾಯಾಗ್ರಹಣ ಇಲ್ಲದ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದಕ್ಕಾಗಿ ಮತ್ತು ಅನಧಿಕೃತ ಹಾರಾಟಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
ಭಾರತೀಯ ನ್ಯಾಯಸಂಹಿತೆ ಸೆಕ್ಷನ್ 223 (ಶಾಂತಿ ಭಂಗ) ಮತ್ತು 351 (1) (ಸುರಕ್ಷತೆಗೆ ಅಪಾಯ ತರುವ ಕೃತ್ಯ) ಅಡಿಯಲ್ಲಿ ಭೂಪೇಂದ್ರ ಸಿಂಗ್ (25) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ಜತೆಗೆ ಐಟಿ ಕಾಯ್ದೆ, ಕಾರಾಗೃಹ ಕಾಯ್ದೆ, ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ. ಸಿಂಗ್ ಪ್ರಕರಣ ಮೇಲ್ನೋಟಕ್ಕೆ ಮಾಮೂಲಿಯಾಗಿ ಕಂಡುಬಂದರೂ, ಈ ಭಾಗದಲ್ಲಿ ಹಲವು ಅಶಾಂತಿಗೆ ಕಾರಣವಾಗಿದೆ.
ಹಿಂದೆ ಹಕ್ಕಿಗಳ ಹಾರಾಟವಿದ್ದ ಶುಭ್ರ ಆಕಾಶದಲ್ಲಿ ಇದೀಗ ದಟ್ಟಣೆ. ರಾತ್ರಿಯಾಗಿ ವಿದ್ಯುತ್ ದೀಪಗಳ ಕಣ್ಣುಮುಚ್ಚಾಲೆಯ ನಡುವೆ ನಿವಾಸಿಗಳು ಛಾವಣಿಯ ಮೇಲೆ ಟಾರ್ಚ್ ಹಿಡಿದುಕೊಂಡು ಗಂಟೆಗಟ್ಟಲೆ ಕಾವಲು ಕಾಯುತ್ತಾರೆ. ಉತ್ತರ ಪ್ರದೇಶದ ಗ್ರಾಮಸ್ಥರು ಮೇಲ್ಚಾವಣಿಯ ಕಣ್ಗಾವಲು ಕಾಯುತ್ತಿದ್ದು, ಕೆಳಮಟ್ಟದಲ್ಲಿ ಹಾರುವ ಡ್ರೋನ್ ಗಳನ್ನು ಅನುಮಾನದಿಂದ ಟಾರ್ಚ್, ಕಲ್ಲು ಮತ್ತು ಬಡಿಗೆಗಳಿಂದ ಬೆನ್ನಟ್ಟುತ್ತಿದ್ದಾರೆ. ಹಲವು ಬಾರಿ ಈ ಹಿಂದೆಯೂ ಜೈಲು ಆವರಣದ ವಾಯುಪ್ರದೇಶದಲ್ಲಿ ಇಂಥ ಉಲ್ಲಂಘನೆಗಳು ಸಂಭವಿಸಿವೆ. ಬಲೂಂದರ್ ಶಹರ್, ಬಿಜ್ನೂರ್, ಮೊರದಾಬಾದ್ ಮತ್ತು ಅಮ್ರೋಹಾ ಜಿಲ್ಲೆಗಳಲ್ಲೂ ಇಂಥ ಅಪರಿಚಿತ ದೀಪಗಳು ಕಾಣಿಸಿಕೊಳ್ಳುತ್ತಿವೆ.
ಗ್ರಾಮಸ್ಥರು ದೀಪ ಆರಿಸಿ ಮಲಗಿದ ಬಳಿಕ ಮಾವಿನ ತೋಟಗಳಲ್ಲಿ, ಛಾವಣಿಗಳಲ್ಲಿ ಹೊಲಗಳಲ್ಲಿ ಕೆಂಪು ಮತ್ತು ನೀಲಿ ದೀಪಗಳು ಮಿನುಗುತ್ತವೆ. ಯಾರು ಈ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ಯಾರಿಗೂ ತಿಳಿದಿಲ್ಲವಾದರೂ, ಎಲ್ಲರೂ ಗಮನಿಸುತ್ತಿದ್ದಾರೆ. ಕೆಲವೊಬ್ಬರು ಆಗಸದತ್ತ ಗುಂಡು ಹಾರಿಸಿದ ಘಟನೆಯೂ ನಡೆದಿದೆ.