ತಮಿಳಿನಲ್ಲಿ ಮಾತನಾಡದ ವಲಸೆ ಕಾರ್ಮಿಕನಿಗೆ ಇರಿತ; ದುಷ್ಕರ್ಮಿಗಳಿಗಾಗಿ ಪೊಲೀಸರ ಶೋಧ
Photo Credit : newindianexpress.com
ಕೊಯಮತ್ತೂರು, ಡಿ.31: ತಮಿಳಿನಲ್ಲಿ ಮಾತನಾಡದೆ ಇದ್ದುದಕ್ಕಾಗಿ ಬೇಕರಿಯೊಂದರಲ್ಲಿ ವಲಸೆ ಕಾರ್ಮಿಕನೊಬ್ಬನೊಂದಿಗೆ ವಾಗ್ವಾದಕ್ಕಿಳಿದ ಇಬ್ಬರು ವ್ಯಕ್ತಿಗಳು ಆತನಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಕೊಯಮತ್ತೂರಿನ ಕರುಮಾದಂಪಟ್ಟಿ ಸಮೀಪ ವರದಿಯಾಗಿದೆ.
ಡಿಸೆಂಬರ್ 15ರಂದು ಈ ಘಟನೆ ನಡೆದಿದ್ದು, ಅದರ ಸಿಸಿಟಿವಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮೂಲತಃ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ನಿವಾಸಿ 27 ವರ್ಷದ ಗೋವಿಂದ್ ಕೊಂಡ್, ಕೊಯಮತ್ತೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದನು. ಆತ ಕರುಮಾದಂಪಟ್ಟಿಯಲ್ಲಿರುವ ಖಾಸಗಿ ಹಾಲ್‌ನಲ್ಲಿ 2025ರ ಡಿಸೆಂಬರ್ 9ರಿಂದ ವಾಸ್ತವ್ಯ ಹೂಡಿದ್ದನು.
ಡಿಸೆಂಬರ್ 15ರಂದು ಗೋವಿಂದ್ ಹಾಗೂ ಆತನ ಸಹದ್ಯೋಗಿ ರಾಕೇಶ್ (19) ಚಹಾ ಕುಡಿಯಲೆಂದು ಸಮೀಪದ ಬೇಕರಿಗೆ ತೆರಳಿದ್ದರು. ಅಲ್ಲಿಗೆ ಆಗಮಿಸಿದ ಇಬ್ಬರು ಗೋವಿಂದ್ ನನ್ನು ತಮಿಳಿನಲ್ಲಿ ಪ್ರಶ್ನಿಸಿದರು. ಅದಕ್ಕೆ ಗೋವಿಂದ್ ತನಗೆ ತಮಿಳು ತಿಳಿದಿಲ್ಲವೆಂದು ಹಿಂದಿಯಲ್ಲಿ ಉತ್ತರಿಸಿದ್ದ.
ಆಗ ವಾಗ್ವಾದ ನಡೆದಾಗ ಒಬ್ಬಾತ ರಾಕೇಶ್ ನ ಕೆನ್ನೆಗೆ ಬಾರಿಸಿದ್ದ. ಗೋವಿಂದ್ ಮಧ್ಯಪ್ರವೇಶಿಸಿದಾಗ, ದುಷ್ಕರ್ಮಿಯು ತನ್ನ ಉಡುಪಿನಲ್ಲಿ ಬಚ್ಚಿಟ್ಟಿದ್ದ ಚಾಕುವನ್ನು ಹೊರಗೆಳೆದು, ಆತನ ಎದೆ, ಸೊಂಟದ ಎಡಭಾಗ ಹಾಗೂ ಕೈಗಳಿಗೆ ಇರಿದಿದ್ದ. ಆಗ ಬೇಕರಿಯ ಸಿಬ್ಬಂದಿ ಮಧ್ಯಪ್ರವೇಶಿಸಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದರು.
ಗಾಯಗಳಾಗಿದ್ದ ಗೋವಿಂದ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ನೀಡಿದ ದೂರನ್ನು ಆಧರಿಸಿ ಕರುಮಾದಂಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.