×
Ad

ಶೀಘ್ರದಲ್ಲೇ ಅಫ್ಘಾನ್‌ನಲ್ಲಿ ಭಾರತದ ರಾಯಭಾರಿ ಕಚೇರಿ ಪ್ರಾರಂಭ : ಸಚಿವ ಎಸ್.ಜೈಶಂಕರ್

Update: 2025-10-10 22:16 IST

 Photo Credit : PTI  

ಹೊಸದಿಲ್ಲಿ,ಅ.10: ಮಹತ್ವದ ರಾಜತಾಂತ್ರಿಕ ನಡೆಯೊಂದರಲ್ಲಿ ಭಾರತವು ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ತನ್ನ ರಾಜತಾಂತ್ರಿಕ ಮಿಶನ್ ಅನ್ನು ಸುಸಜ್ಜಿತವಾದ ರಾಯಭಾರಿ ಕಚೇರಿಯಾಗಿ ಮೇಲ್ದರ್ಜೆಗೇರಿಸುವುದಾಗಿ ಶುಕ್ರವಾರ ಘೋಷಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹಾಗೂ ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ತಾನದ ಪ್ರಭಾರ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಾಕಿ ನಡುವೆ ನಡೆದ ಮಾತುಕತೆಯ ಸಂದರ್ಭ ಈ ಘೋಷಣೆ ಹೊರಬಿದ್ದಿದೆ. ಮಾತುಕತೆಯಲ್ಲಿ ಉಭಯ ದೇಶಗಳು ಸಚಿವರು ಅಫ್ಘಾನಿಸ್ತಾನದ ಪುನರ್‌ನಿಮಾಣ, ಮಾನವೀಯನೆರವಿನಿಂದ ಹಿಡಿದು ದ್ವಿಪಕ್ಷೀಯ ಭದ್ರತಾ ಸಹಕಾರ ಹಾಗೂ ವ್ಯಾಪಾರದ ಬಗ್ಗೆ ಚರ್ಚಿಸಿದ್ದಾರೆ.

ಕಾಬೂಲ್‌ನಲ್ಲಿರುವ ತಾಂತ್ರಿಕ ಮಿಶನ್‌ಗೆ ಭಾರತೀಯ ರಾಯಭಾರ ಕಚೇರಿಯ ಸ್ಥಾನಮಾನವನ್ನು ನೀಡುವುದಾಗಿ ಘೋಷಿಸಲು ನಾನು ಸಂತಸಪಡುತ್ತೇನೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಾರೆ. ಈ ನಡೆಯು ಅಫ್ಘಾನಿಸ್ತಾನದ ಜನತೆ ಹಾಗೂ ಅವರ ಭವಿಷ್ಯದ ಬಗ್ಗೆ ಭಾರತಕ್ಕಿರುವ ವಿಸ್ತೃತವಾದ ಬದ್ಧತೆಯ ಭಾಗವಾಗಿದೆ ಎಂದವರು ಬಣ್ಣಿಸಿದ್ದಾರೆ.

ಭದ್ರತಾ ಕಳವಳಗಳು ಮಾತುಕತೆಯ ಕೇಂದ್ರ ಬಿಂದುವಾಗಿತ್ತೆಂದು ಅವರು ಹೇಳಿದ್ದಾರೆ. ‘‘ ಪ್ರಗತಿ ಹಾಗೂ ಬೆಳವಣಿಗೆಗೆ ನಾವು ಸಮಾನವಾದ ಬದ್ಧತೆಯನ್ನು ಹೊಂದಿದ್ದೇವೆ. ಆದಾಗ್ಯೂ, ಅವು ಎರಡೂ ದೇಶಗಳು ಎದುರಿಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ ಬೆದರಿಕೆಯಿಂದಾಗಿ ಅಪಾಯದಲ್ಲಿವೆ’’ ಎಂದು ಜೈಶಂಕರ್ ಕಳವಳ ವ್ಯಕ್ತಪಡಿಸಿದರು.

ಭಾರತದ ಭದ್ರತಾ ಕಳವಳಗಳ ಬಗ್ಗೆ ನಿಮಗಿರುವ ಸಂವೇದನೆಯನ್ನು ನಾವು ಶ್ಲಾಘಿಸುತ್ತೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತದೊಂದಿಗೆ ಅಫ್ಘಾನಿಸ್ತಾನವು ಒಗ್ಗಟ್ಟನ್ನು ಪ್ರದರ್ಶಿಸಿರುವುದು ಗಮನಾರ್ಹವೆಂದು ಹೇಳಿದರು.

ಅಫ್ಘಾನಿಸ್ತಾನದ ಅಭಿವೃದ್ಧಿಯಲ್ಲಿ ಭಾರತವು ಪ್ರಮುಖ ಪಾಲುದಾರನೆಂದು ಜೈಶಂಕರ್ ತಿಳಿಸಿದರು. ಉಭಯ ದೇಶಗಳ ದೀರ್ಘಾವಧಿಯ ಪಾಲುದಾರಿಕೆಯ ಫಲವಾಗಿ ಅಫ್ಘಾನಿಸ್ತಾನದಲ್ಲಿ ಹಲವಾರು ಭಾರತೀಯ ಯೋಜನೆಗಳಿಗೆ ಪುನರುಜ್ಜೀವನ ನೀಡಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News