ʼರೈತರಿಂದ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದುʼ: ರೈತರ ಪ್ರತಿಭಟನೆ ಮಧ್ಯೆ ರಾಜ್ಯಸಭೆಗೆ ತಿಳಿಸಿದ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್ | PC : PTI
ಹೊಸದಿಲ್ಲಿ: ರೈತರ ದಿಲ್ಲಿ ಚಲೋ ಪ್ರತಿಭಟನೆ ಹಿನ್ನೆಲೆ ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನರೇಂದ್ರ ಮೋದಿ ಸರ್ಕಾರವು ಎಲ್ಲಾ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಿದೆ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಶುಕ್ರವಾರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ರೈತರ ಎಲ್ಲಾ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂದು ನಾನು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ. ಇದು ಮೋದಿ ಸರ್ಕಾರ ಮತ್ತು ಮೋದಿಯವರ ಭರವಸೆಯನ್ನು ಈಡೇರಿಸುವ ಗ್ಯಾರಂಟಿಯಾಗಿದೆ ಎಂದು ಹೇಳಿದ್ದಾರೆ.
ಸದನದಲ್ಲಿ ಪ್ರತಿಪಕ್ಷವನ್ನು ತರಾಟೆಗೆ ತೆಗೆದುಕೊಂಡ ಸಚಿವ ಶಿವರಾಜ್ ಸಿಂಗ್ ಚೌಹಾಣ್, ನಮ್ಮ ಸ್ನೇಹಿತರು ಅಧಿಕಾರದಲ್ಲಿದ್ದಾಗ, ಅವರು ಎಂಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಸ್ವೀಕರಿಸಿಲ್ಲ. ಇದು ದಾಖಲೆಯಲ್ಲಿದೆ ಎಂದು ಹೇಳಿದ್ದಾರೆ.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಒಂಬತ್ತು ತಿಂಗಳಿನಿಂದ ಪಂಜಾಬ್-ಹರ್ಯಾಣ ಗಡಿಯಲ್ಲಿ ಮೊಕ್ಕಾಂ ಹೂಡಿರುವ ರೈತರು ಶುಕ್ರವಾರ ಮತ್ತೆ ಸಂಸತ್ತಿಗೆ ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ಪುನರಾರಂಭಿಸಲು ಮುಂದಾಗಿದ್ದಾರೆ. ಆದರೆ ಪೊಲೀಸರು ಅವರನ್ನು ತಡೆದಿದ್ದಾರೆ.