ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದ ಮಿಜೋರಾಂ ಸಿಎಂ
ಪ್ರಧಾನಿ ನರೇಂದ್ರ ಮೋದಿ ಜೊತೆ ಮಿಜೋರಾಂ ಸಿಎಂ ಝೊರಮ್ತುಂಗ (Photo:Twitter/PMO India)
ಹೊಸದಿಲ್ಲಿ: ಮುಂಬರುವ ವಿಧಾನಸಭಾ ಚುನಾವಣೆಗಾಗಿ ಪ್ರಚಾರಾಭಿಯಾನದ ವೇಳೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮಿಜೋರಾಂ ಮುಖ್ಯಮಂತ್ರಿ ಝೊರಮ್ತುಂಗ ಅವರು ಹೇಳಿದ್ದಾರೆಂದು ಬಿಬಿಸಿ ವರದಿ ಮಾಡಿದೆ. ರಾಜ್ಯದಲ್ಲಿ ಚುನಾವಣೆ ನವೆಂಬರ್ 7ರಂದು ನಡೆಯಲಿದೆ.
ಪ್ರಧಾನಿ ಮೋದಿ ಮಮಿತ್ ಪಟ್ಟಣಕ್ಕೆ ಅಕ್ಟೋಬರ್ 30ರಂದು ಭೇಟಿ ನೀಡುವ ಕಾರ್ಯಕ್ರಮವಿದ್ದು ಆ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತಿತರ ಪ್ರಮುಖ ಪಕ್ಷದ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ಬಿಜೆಪಿ ನೇತೃತ್ವದ ನಾರ್ತ್ ಈಸ್ಟ್ ಡೆಮಾಕ್ರೆಟಿಕ್ ಅಲಾಯನ್ಸ್ ಭಾಗವಾಗಿದ್ದರೂ ತಮ್ಮ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್ ಈ ಹಂತದಲ್ಲಿ ಬಿಜೆಪಿಗೆ ಅನುಕಂಪ ತೋರಿಸುವ ಅಗತ್ಯವಿಲ್ಲ ಎಂದು ಮಣಿಪುರದ ಸಂಘರ್ಷಮಯ ಸ್ಥಿತಿಯನ್ನು ಉಲ್ಲೇಖಿಸಿ ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಹೇಳಿದರು.
“ಮಿಜೋರಾಂನ ಜನರೆಲ್ಲರೂ ಕ್ರೈಸ್ತರು. ಮಣಿಪುರದಲ್ಲಿ ನೂರಾರು ಚರ್ಚುಗಳಿಗೆ ಮೈತೈಗಳು ಬೆಂಕಿ ಹಚ್ಚಿದಾಗ, ಅವರು (ಮಿಜೋರಾಂ ಜನರು) ಅದಕ್ಕೆ ಸಂಪೂರ್ಣ ವಿರುದ್ಧವಾಗಿದ್ದರು,” ಎಂದು ಅವರು ಹೇಳಿದರು.
“ಪ್ರಧಾನಿ ಅವರೊಬ್ಬರೇ ವೇದಿಕೆ ಹಂಚಿಕೊಂಡರೆ ಮತ್ತು ನಾನು ಪ್ರತ್ಯೇಕವಾಗಿ ಬೇರೆ ವೇದಿಕೆ ಹಂಚಿಕೊಂಡರೆ ಒಳ್ಳೆಯದು,” ಎಂದು ಮುಖ್ಯಮಂತ್ರಿ ಹೇಳಿದರು.
ನಮ್ಮ ಪಕ್ಷವು ಕಾಂಗ್ರೆಸ್ ಅನ್ನು ವಿರೋಧಿಸುವ ಕಾರಣ ಅದು ಕೇಂದ್ರದಲ್ಲಿ ಎನ್‌ಡಿಎ ಭಾಗವಾಗಿದೆ ಎಂದು ಅವರು ಹೇಳಿದರು.