ಸ್ಥಳೀಯ ಯುವಕರಿಗೆ ವಿದೇಶಗಳಲ್ಲಿ ಉದ್ಯೋಗಾವಕಾಶ: ಖಾಸಗಿ ಉದ್ಯೋಗ ನೇಮಕಾತಿ ಸಂಸ್ಥೆಗಳ ನಿಯಂತ್ರಣಕ್ಕೆ ಮಿಝೋರಾಂನಿಂದ ಹೊಸ ಕಾಯ್ದೆ
ಸಾಂದರ್ಭಿಕ ಚಿತ್ರ | PC : PTI
ಐಝ್ವಾಲ್: ಸ್ಥಳೀಯ ಯುವಕರನ್ನು ವಿದೇಶಗಳಿಗೆ ಉದ್ಯೋಗಕ್ಕೆ ರವಾನಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಉದ್ಯೋಗ ನೇಮಕಾತಿ ಸಂಸ್ಥೆಗಳನ್ನು ನಿಯಂತ್ರಿಸುವ ಉದ್ದೇಶ ಹೊಂದಿರುವ ಮಸೂದೆಯೊಂದು ಸೋಮವಾರ ಮಿಝೋರಾಂ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ ಎಂದು ರವಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಲಾಲ್ನ್ಂಘ್ ಲೋವಾ ಹ್ಮಾರ್ ಅವರು, ಮಿಝೋರಾಂ ಖಾಸಗಿ ಉದ್ಯೋಗ ನೇಮಕಾತಿ ಸಂಸ್ಥೆಗಳು (ನಿಯಂತ್ರಣ) ಮಸೂದೆ, 2025 ಅನ್ನು ಮಂಡಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಮಸೂದೆಯು ಇತರ ದೇಶಗಳಿಗೆ ರಾಜ್ಯದಿಂದ ಹೊರಗೆ ಮನೆಗೆಲಸ ಸೇರಿದಂತೆ ಇತರ ಉದ್ಯೋಗಗಳಿಗೆ ಕಾನೂನುಬದ್ಧವಾಗಿ ಯುವಕರನ್ನು ರವಾನಿಸುವ ಖಾಸಗಿ ಉದ್ಯೋಗ ನೇಮಕಾತಿ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುವ ಗುರಿ ಹೊಂದಿದೆ.
ಈ ಮಸೂದೆಯು ಶಾಸನವಾಗಿ ಜಾರಿಗೊಂಡ ನಂತರ, ಖಾಸಗಿ ಉದ್ಯೋಗ ನೇಮಕಾತಿ ಸಂಸ್ಥೆಗಳು ಸರಕಾರದ ಬಳಿ ನೋಂದಾಯಿಸಿಕೊಂಡು, ಪರವಾನಗಿ ಪತ್ರ ಪಡೆಯುವುದು ಕಡ್ಡಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ವಿದೇಶಗಳಿಗೆ, ನಿರ್ದಿಷ್ಟವಾಗಿ ಸಿರಿಯ ಹಾಗೂ ಯುಎಇಯಂತಹ ದೇಶಗಳಿಗೆ ಕೆಲವು ಮಿಝೋರಾಂ ಮಹಿಳಾ ಉದ್ಯೋಗಿಗಳನ್ನು ಅಕ್ರಮವಾಗಿ ರವಾನಿಸಿ, ಅವರು ಅಲ್ಲಿ ಕಾನೂನು ಸಮಸ್ಯೆಗಳನ್ನು ಎದುರಿಸಿದ್ದ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಕೇಂದ್ರ ಸರಕಾರದ ನೆರವಿನೊಂದಿಗೆ ಸಿರಿಯ ಹಾಗೂ ಇನ್ನಿತರ ಅರಬ್ ದೇಶಗಳಲ್ಲಿ ಮನೆಗೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಇಂತಹ ಹಲವಾರು ಮಹಿಳೆಯರನ್ನು ಮಿಝೋರಾಂ ಸರಕಾರ ರಕ್ಷಿಸಿ, ವಾಪಸು ಕರೆ ತಂದಿತ್ತು.
ಇದಕ್ಕೂ ಮುನ್ನ, 2015ರಲ್ಲಿ ಕಾಂಗ್ರೆಸ್ ಸರಕಾರ ಮಿಝೋರಾಂ ಖಾಸಗಿ ಉದ್ಯೋಗ ನೇಮಕಾತಿ ಸಂಸ್ಥೆ (ನಿಯಂತ್ರಣ) ಕಾಯ್ದೆಯನ್ನು ಜಾರಿಗೊಳಿಸಿತ್ತು. ಆದರೆ, ಈ ಕಾಯ್ದೆಯು ಭಾರತದೊಳಗೆ ಯಾವುದೇ ಮಹಿಳೆಗೆ ಮನೆಗೆಲಸದ ಉದ್ಯೋಗ ಒದಗಿಸುವ ಅಧಿಕಾರವನ್ನು ಖಾಸಗಿ ಉದ್ಯೋಗ ನೇಮಕಾತಿ ಸಂಸ್ಥೆಗಳಿಗೆ ಒದಗಿಸಿತ್ತು ಎಂದು ಅವರು ತಿಳಿಸಿದ್ದಾರೆ.