ಶ್ರೀನಗರ | ದರ್ಗಾ ಆವರಣದಲ್ಲಿ ಅಶೋಕ ಲಾಂಛನವಿದ್ದ ಫಲಕ ಒಡೆದ ಗುಂಪು!
Photo credit: newindianexpress.com
ಶ್ರೀನಗರ: ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ಗುಂಪೊಂದು ಹಝರತ್‌ಬಾಲ್ ದರ್ಗಾ ಆವರಣದಲ್ಲಿದ್ದ ಫಲಕದಲ್ಲಿನ ಅಶೋಕ ಚಿಹ್ನೆಯನ್ನು ಒಡೆದ ಬಳಿಕ ಉದ್ವಿಗ್ನತೆ ಉಂಟಾಗಿದೆ.
ಜಮ್ಮುಕಾಶ್ಮೀರ ವಕ್ಫ್ ಬೋರ್ಡ್ ಅಧ್ಯಕ್ಷೆ ಹಾಗೂ ಬಿಜೆಪಿ ನಾಯಕಿ ದಾರಾಕ್ಷನ್ ಅಂದ್ರಾಬಿ ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಕರೆದಿದ್ದಾರೆ. ಈ ಕುರಿತು ಶಾಸಕ ತನ್ವೀರ್ ಸಾದಿಕ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಸೆಪ್ಟೆಂಬರ್ 3ರಂದು ವಕ್ಫ್ ಬೋರ್ಡ್ ಅಧ್ಯಕ್ಷೆ ದಾರಾಕ್ಷನ್ ಅಂದ್ರಾಬಿ ಅವರು ಶಿಲಾನ್ಯಾಸ ಮಾಡಿದ್ದಾರೆ. ಫಲಕದಲ್ಲಿ ಅವರ ಹೆಸರನ್ನು ಕೂಡ ಬರೆಯಲಾಗಿತ್ತು. ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿದೆ ಎಂದು ಫಲಕವನ್ನು ಒಡೆದು ಹಾಕಲಾಗಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರ ಆಪ್ತರಾಗಿರುವ ಎನ್‌ಸಿ ಶಾಸಕ ತನ್ವೀರ್ ಸಾದಿಕ್, "ನಾನು ಧಾರ್ಮಿಕ ವಿದ್ವಾಂಸನಲ್ಲ. ಆದರೆ ಇಸ್ಲಾಂನಲ್ಲಿ, ವಿಗ್ರಹಾರಾಧನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ” ಎಂದು ಹೇಳಿದ್ದರು.