×
Ad

ಹೆಚ್ಚಿನ ಭಾರತೀಯರಲ್ಲಿ ಮೋದಿ ಆಡಳಿತದಡಿ ಜೀವನಮಟ್ಟ ಸುಧಾರಣೆಯ ಭರವಸೆ ನಶಿಸುತ್ತಿದೆ: ಸಮೀಕ್ಷೆ

Update: 2025-01-31 20:45 IST

 ನರೇಂದ್ರ ಮೋದಿ | PC : PTI 

ಹೊಸದಿಲ್ಲಿ: ಹೆಚ್ಚಿನ ಭಾರತೀಯರು ಏರದ ವೇತನಗಳು ಮತ್ತು ದುಬಾರಿ ಜೀವನ ವೆಚ್ಚಗಳು ಭವಿಷ್ಯದ ನಿರೀಕ್ಷೆಗಳನ್ನು ಮಸುಕಾಗಿಸಿರುವುದರಿಂದ ತಮ್ಮ ಜೀವನಮಟ್ಟದಲ್ಲಿ ಏನಾದರೂ ಸುಧಾರಣೆಯಾಗಬಹುದು ಎಂಬ ಭರವಸೆಯನ್ನು ಕಳೆದುಕೊಂಡಿದ್ದಾರೆ ಎಂದು ಸಿ-ವೋಟರ್ ಸಮೀಕ್ಷಾ ವರದಿಯು ಹೇಳಿದೆ. ಇದು 2025-26ನೇ ಸಾಲಿನ ಬಜೆಟ್ ಮಂಡನೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿಯವರ ಪಾಲಿಗೆ ನಿರಾಶಾದಾಯಕ ಸುದ್ದಿಯಾಗಿದೆ.

ಬಜೆಟ್ ಪೂರ್ವ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ.37ಕ್ಕೂ ಅಧಿಕ ಜನರು ಮುಂದಿನ ವರ್ಷ ಜನಸಾಮಾನ್ಯರ ಒಟ್ಟಾರೆ ಜೀವನ ಗುಣಮಟ್ಟ ಇನ್ನಷ್ಟು ಹದಗೆಡಲಿದೆ ಎಂದು ನಿರೀಕ್ಷಿಸಿದ್ದು,ಇದು 2013ರ ನಂತರ ಇಂತಹ ಹತಾಶೆಯನ್ನು ವ್ಯಕ್ತಪಡಿಸಿದವರ ಅತ್ಯಂತ ಹೆಚ್ಚು ಶೇಕಡಾವಾರು ಪ್ರಮಾಣವಾಗಿದೆ ಎಂದು ಸಿ-ವೋಟರ್ ಬುಧವಾರ ಬಿಡುಗಡೆಗೊಳಿಸಿದ ವರದಿಯು ತಿಳಿಸಿದೆ. ಮೋದಿ 2024ರಿಂದ ಪ್ರಧಾನಿಯಾಗಿದ್ದಾರೆ.

ಸಮೀಕ್ಷೆಗಾಗಿ ಸಿ-ವೋಟರ್ ದೇಶಾದ್ಯಂತ 5,269 ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. ಆಹಾರ ವೆಚ್ಚ ನಿರಂತರವಾಗಿ ಗಗನಕ್ಕೇರುತ್ತಿದ್ದು,ಇದು ಭಾರತೀಯ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲುಗೊಳಿಸಿದೆ,ಜನರ ವೆಚ್ಚ ಮಾಡುವ ಶಕ್ತಿಯನ್ನು ಕುಂದಿಸಿದೆ ಮತ್ತು ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯು ನಾಲ್ಕು ವರ್ಷಗಳಲ್ಲಿ ತನ್ನ ಅತ್ಯಂತ ಮಂದಗತಿಯ ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಸುಮಾರು ಮೂರನೇ ಎರಡರಷ್ಟು ಜನರು ಮೋದಿ ಪ್ರಧಾನಿಯಾದಾಗಿನಿಂದ ಹಣದುಬ್ಬರವು ಅನಿಯಂತ್ರಿತವಾಗಿ ಉಳಿದಿದೆ ಮತ್ತು ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿವೆ ಎಂದು ಹೇಳಿದ್ದರೆ,ಅರ್ಧಕ್ಕೂ ಹೆಚ್ಚು ಜನರು ಹಣದುಬ್ಬರವು ತಮ್ಮ ಜೀವನ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದಿದ್ದಾರೆ. ಮೋದಿ ಸರಕಾರವು ಸೋಮವಾರ ಮಂಡಿಸಲಿರುವ ವಾರ್ಷಿಕ ಬಜೆಟ್‌ನಲ್ಲಿ ಕುಂಟುತ್ತಿರುವ ಆರ್ಥಿಕ ಬೆಳವಣಿಗೆಯನ್ನು ಮತ್ತು ಆದಾಯಗಳನ್ನು ಹೆಚ್ಚಿಸಲು ಹಾಗೂ ಮಧ್ಯಮ ವರ್ಗವನ್ನು ಸಮಾಧಾನಿಸಲು ಕ್ರಮಗಳನ್ನು ಘೋಷಿಸುವ ನಿರೀಕ್ಷೆಯಿದೆ.

ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಸುಮಾರು ಅರ್ಧದಷ್ಟು ಜನರು ಕಳೆದ ವರ್ಷ ತಮ್ಮ ಆದಾಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ,ಆದರೆ ವೆಚ್ಚಗಳು ಹೆಚ್ಚುತ್ತಲೇ ಇವೆ ಎಂದು ಹೇಳಿದರೆ,ಸುಮಾರು ಮೂರನೇ ಎರಡರಷ್ಟು ಜನರು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ ಎಂದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಗಮನಾರ್ಹ ಆರ್ಥಿಕ ಬೆಳವಣಿಗೆಯ ಹೊರತಾಗಿಯೂ ಭಾರತದ ಉದ್ಯೋಗ ಮಾರುಕಟ್ಟೆಯು ಹೆಚ್ಚಿನ ಸಂಖ್ಯೆಯಲ್ಲಿರುವ ತನ್ನ ಯವಜನರಿಗೆ ನಿಯಮಿತ ವೇತನಗಳನ್ನು ಗಳಿಸಲು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿಲ್ಲ ಎಂದು ವರದಿಯು ಹೇಳಿದೆ.

ಕಳೆದ ವರ್ಷದ ಬಜೆಟ್‌ನಲ್ಲಿ ಸರಕಾರವು ಉದ್ಯೋಗ ಸೃಷ್ಟಿಗಾಗಿ ಐದು ವರ್ಷಗಳಲ್ಲಿ ವಿವಿಧ ಯೋಜನೆಗಳಿಗಾಗಿ ಸುಮಾರು 2 ಲ.ಕೋ.ರೂ.ಗಳನ್ನು ಮೀಸಲಿರಿಸಿತ್ತು,ಆದರೆ ಯೋಜನೆಗಳ ಮೇಲಿನ ಚರ್ಚೆಗಳು ವಿಳಂಬಗೊಂಡಿರುವುದರಿಂದ ಅವಿನ್ನೂ ಕಾರ್ಯಗತಗೊಂಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News