×
Ad

ಅಸಿಯಾನ್ ಶೃಂಗಸಭೆಗೆ ಮೋದಿ ಗೈರು; ವೀಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲು ಪ್ರಧಾನಿ ನಿರ್ಧಾರ

ಮಲೇಶ್ಯದಲ್ಲಿ ನಡೆಯುವ ಶೃಂಗಸಭೆಯಲ್ಲಿ ಭಾಗವಹಿಸುವ ಭಾರತೀಯ ನಿಯೋಗಕ್ಕೆ ಸಚಿವ ಜೈ.ಶಂಕರ್ ನೇತೃತ್ವ

Update: 2025-10-23 20:59 IST

ನರೇಂದ್ರ ಮೋದಿ | Photo Credit : PTI

ಹೊಸದಿಲ್ಲಿ: ಮಲೇಶ್ಯದ ಕೌಲಾಲಂಪುರದಲ್ಲಿ ಈ ವಾರಾಂತ್ಯ ನಡೆಯಲಿರುವ ಅಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುವುದಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಿಳಿಸಿದ್ದಾರೆ. ಆದರೆ ವೀಡಿಯೊ ಕಾನ್ಫರೆನ್ಸ್ ಮೂಲಕ ತಾನು ಅಸಿಯಾನ್-ಭಾರತ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಅವರು ಸಾಮಾಜಿಕ ಜಾಲತಾಣವೊಂದರಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅಸಿಯಾನ್ ಶೃಂಗಸಭೆಗೆ ಪ್ರಧಾನಿಯವರ ಪಾಲ್ಗೊಳ್ಳುವಿಕೆ ರದ್ದತಿಗೆ ಯಾವುದೇ ಕಾರಣವನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಒದಗಿಸಿಲ್ಲ. ಆದರೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ನೇತೃತ್ವದ ಭಾರತೀಯ ನಿಯೋಗವೊಂದು ಶೃಂಗಸಭೆಯಲ್ಲಿ ಭಾಗವಹಿಸಲಿದೆ ಎಂದು ತಿಳಿದುಬಂದಿದೆ. ಅಸಿಯಾನ್ ಶೃಂಗಸಭೆಯು ಅಕ್ಟೋಬರ್ 26ರಿಂದ 28ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

ಪ್ರಧಾನಿ ಮೋದಿಯವರು ಗುರುವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಅಸಿಯಾನ್‌ಗೆ ಮಲೇಶ್ಯದ ಅಧ್ಯಕ್ಷತೆಗಾಗಿ ಪ್ರಧಾನಿ ಅನ್ವರ್ ಇಬ್ರಾಹೀಂ ಅವರನ್ನು ಅಭಿನಂದಿಸಿದ್ದಾರೆ ಹಾಗೂ ಮುಂಬರುವ ಶೃಂಗಸಭೆಗಳ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಅಸಿಯಾನ್-ಭಾರತ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದನ್ನು ಹಾಗೂ ಅಸಿಯಾನ್-ಭಾರತ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ವೃದ್ಧಿಸುವುದನ್ನು ತಾನು ಎದುರು ನೋಡುತ್ತಿರುವುದಾಗಿ ಮೋದಿ ಹೇಳಿದ್ದಾರೆ.

ಮಲೇಶ್ಯದ ರಾಜಧಾನಿ ಕೌಲಾಲಂಪುರದಲ್ಲಿ ನಡೆಯಲಿರುವ ಅಸಿಯಾನ್ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಸೇರಿದಂತೆ ಹಲವಾರು ಜಾಗತಿಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಶ್ಯದಿಂದ ಕಚ್ಚಾ ತೈಲ ಖರೀದಿಗಾಗಿ ಭಾರತದ ಮೇಲೆ ಟ್ರಂಪ್ ದಂಡನಾತ್ಮಕ ಸುಂಕವನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಉಭಯರಾಷ್ಟ್ರಗಳ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಮೋದಿ ಹಾಗೂ ಟ್ರಂಪ್ ಪರಸ್ಪರ ಭೇಟಿಯಾಗುವುದಕ್ಕೆ ಅಸಿಯಾನ್ ಸಮಾವೇಶವು ವೇದಿಕೆಯಾಗಲಿದೆಯೆಂದು ನಿರೀಕ್ಷಿಸಲಾಗಿತ್ತು.

ಈ ಮಧ್ಯೆ ವ್ಯಾಪಾರ ಒಪ್ಪಂದವನ್ನು ರೂಪಿಸಲು ಭಾರತ ಹಾಗೂ ಅಮೆರಿಕ ನಿಯೋಗಳ ನಡುವಿನ ಮಾತುಕತೆಗಳು ಮುಂದುವರಿದಿವೆ. ಟ್ರಂಪ್ ಹಾಗೂ ಮೋದಿ ಅವರು ಮಂಗಳವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಪರಸ್ಪರ ದೀಪಾವಳಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಮೋದಿ ಜೊತೆಗಿನ ದೂರವಾಣಿ ಮಾತುಕತೆಯು ಉಭಯದೇಶಗಳ ನಡುವೆ ಏರ್ಪಡಲಿರುವ ವ್ಯಾಪಾರ ಒಪ್ಪಂದ, ರಶ್ಯದಿಂದ ತೈಲ ಖರೀದಿ ವಿವಾದ ಹಾಗೂ ಪಾಕಿಸ್ತಾನದ ಜೊತೆ ಯುದ್ಧ ನಡೆಸದೆ ಇರುವುದು ಇತ್ಯಾದಿ ವಿಚಾರಗಳ ಬಗ್ಗೆ ಕೇಂದ್ರೀಕೃತವಾಗಿತ್ತು ಎಂದು ಬಗ್ಗೆ ಕೇಂದ್ರೀತವಾಗಿತ್ತು ಎಂದು ಟ್ರಂಪ್ ಅವರು ಶ್ವೇತಭವನದಲ್ಲಿ ಭಾರತೀಯ ಮೂಲದ ಅಮೆರಿಕನ್ನರು ಹಾಗೂ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ತಂಡಕ್ಕೆ ತಿಳಿಸಿದ್ದರು.

ಈ ಮೊದಲು ಕೇಂದ್ರ ಸರಕಾರದ ಅಧಿಕಾರಿಗಳು ಅಸಿಯಾನ್ ಶೃಂಗಸಭೆಗೆ ಪ್ರಧಾನಿ ಮೋದಿಯವರ ಭಾಗವಹಿಸುವ ಸಾಧ್ಯತೆ ಬಗ್ಗೆ ಸಮ್ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪ್ರಧಾನಿಯವರ ಉಪಸ್ಥಿತಿಯ ಅವಶ್ಯಕತೆಯನ್ನು ಉಲ್ಲೇಖಿಸಿದ್ದರು.

ಇದಕ್ಕೂ ಮುನ್ನ ಡೊನಾಲ್ಡ್ ಟ್ರಂಪ್ ಅವರು ಗಾಝಾಪಟ್ಟಿಯಲ್ಲಿ ಹಮಾಸ್ ಹಾಗೂ ಇಸ್ರೇಲ್ ನಡುವೆ ಕದನವಿರಾಮ ಏರ್ಪಡಿಸುವುದಕ್ಕೆ ಸಂಬಂಧಿಸಿ ಈಜಿಪ್ಟ್ ಶರ್ಮ್ ಅಲ್ ಶೇಖ್‌ನಲ್ಲಿ ಇತ್ತೀಚೆಗೆ ನಡೆದ ಶೃಂಗಸಭೆಗೆ ಆಹ್ವಾನಿಸಿದ್ದರು. ಆದರೆ ಆ ಸಭೆಯಲ್ಲಿಯೂ ಪ್ರಧಾನಿ ಮೋದಿಯವರು ಪಾಲ್ಗೊಂಡಿರಲಿಲ್ಲ. ಈ ಶೃಂಗಸಭೆಯಲ್ಲಿ ಭಾರತವನ್ನು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಪ್ರತಿನಿಧಿಸಿದ್ದರು.

ಮತ್ತೆ ತಪ್ಪಿದ ಮೋದಿ-ಟ್ರಂಪ್ ಮಾತುಕತೆ:

ರಶ್ಯದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಭಾರತದ ಸರಕುಗಳಿಗೆ ಅಮೆರಿಕವು ಶೇ.50ರಷ್ಟು ಸುಂಕವನ್ನು ವಿಧಿಸಿದ ಬಳಿಕ ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಅವರು ಹಲವು ಬಾರಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು.

ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ಅಂತ್ಯಗೊಳಿಸುವಲ್ಲಿ ಟ್ರಂಪ್ ಅವರ ಮಧ್ಯಸ್ಥಿಕೆಯನ್ನು ಮೋದಿ ಶ್ಲಾಘಿಸಿದ್ದರು. ಆದಾಗ್ಯೂ ಅವಕಾಶಗಳಿದ್ದ ಹೊರತಾಗಿಯೂ ಇವರಿಬ್ಬರೂ ಖುದ್ದಾಗಿ ಭೇಟಿಯಾಗಿಲ್ಲ. ಆಪರೇಶನ್ ಸಿಂಧೂರ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಭುಗಿಲೆದ್ದ ಕದನವನ್ನು ಅಂತ್ಯಗೊಳಿಸಲು ತಾನು ಮಧ್ಯಸ್ಥಿಕೆ ವಹಿಸಿದ್ದೆನೆಂದು ಟ್ರಂಪ್ ಹಲವಾರು ಸಂದರ್ಭಗಳಲ್ಲಿ ಉಲ್ಲೇಖಿಸಿರುವುದು ಈ ಇಬ್ಬರು ನಾಯಕರು ಮುಖತಃ ಭೇಟಿಯಾಗುವ ಸಾಧ್ಯತೆಯನ್ನು ದುಸ್ತರವಾಗಿಸಿದೆ.

ಭಾರತ ಹಾಗೂ ಪಾಕ್ ನಡುವೆ ಕದನವಿರಾಮವನ್ನು ಏರ್ಪಡಿಸಲು ಯಾವುದೇ ದೇಶವು ಮಧ್ಯಸ್ಥಿಕೆ ವಹಿಸಿಲ್ಲವೆಂದು ಭಾರತವು ಹೇಳುತ್ತಾ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News