ಒಂದು ಕಾಲದ ‘ಅತ್ಯುತ್ತಮ ಗೆಳೆಯ’ನ ಜೊತೆ ಶಾಂತಿ ಮರುಸ್ಥಾಪನೆಗಾಗಿ ಮಸೂದೆ ತಂದ ಮೋದಿ
ಶಾಂತಿ ಮಸೂದೆಗೆ ಕಾಂಗ್ರೆಸ್ ಟೀಕೆ
ನರೇಂದ್ರ ಮೋದಿ , ಡೊನಾಲ್ಡ್ ಟ್ರಂಪ್ | Photo Credit : PTI
ಹೊಸದಿಲ್ಲಿ,ಡಿ.20: ಒಂದು ಕಾಲದ ‘ಅತ್ಯುತ್ತಮ ಗೆಳೆಯ’ನ ಜೊತೆ ಶಾಂತಿಯನ್ನು ಮರುಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆರವಾಗುವುದಕ್ಕಾಗಿ ಕೇಂದ್ರ ಸರಕಾರವು ‘ಶಾಂತಿ ಮಸೂದೆ’ಯನ್ನು ಹೇರಿದೆಯೆಂದು ಕಾಂಗ್ರೆಸ್ ಪಕ್ಷ ಶನಿವಾರ ವಾಗ್ದಾಳಿ ನಡೆಸಿದೆ.
ದೇಶದ ಪರಮಾಣು ಕ್ಷೇತ್ರದ ನಿರ್ವಹಣೆಯನ್ನು ಖಾಸಗಿರಂಗಕ್ಕೆ ತೆರೆದಿಡುವ ಶಾಂತಿ ಮಸೂದೆಗೆ ಗುರುವಾರ ಸಂಸತ್‌ನ ಅಂಗೀಕರಿಸಲಾಗಿತ್ತು.
ಭಾರತದ ಮೇಲೆ ಶೇ.50ರಷ್ಟು ಸುಂಕ ಹೇರಿಕೆ, ಆಪರೇಶನ್ ಸಿಂಧೂರ್ ಬಳಿಕ ಭುಗಿಲೆದ್ದ ಬಾರತ-ಪಾಕ್ ಘರ್ಷಣೆಯನ್ನು ತಾನು ನಿಲ್ಲಿಸಿದ್ದೇನೆಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ನೀಡಿದ ಬಳಿಕ ಮೋದಿ ಹಾಗೂ ಟ್ರಂಪ್ ನಡುವಿನ ಬಾಂಧವ್ಯದಲ್ಲಿ ಬಿರುಕು ಮೂಡಿರುವ ಹಿನ್ನೆಲೆಯಲ್ಲಿ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣ ‘ಎಕ್’್ಸನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ರಾಷ್ಟ್ರೀಯ ರಕ್ಷಣಾ ಅಧಿಕೃತಗೊಳಿಸುವಿಕೆ ಕಾಯ್ದೆ 2026, ನಾಗರಿಕ ಬಾಧ್ಯತೆ ಕುರಿತ ಪರಮಾಣು ಹಾನಿ ಕಾಯ್ದೆಯ ಪ್ರಮುಖ ನಿಬಂಧನೆಗಳನ್ನು ಶಾಂತಿ ಮಸೂದೆಯು ಗಾಳಿಗೆ ತೂರಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕಳವಳ ವ್ಯಕ್ತಪಡಿಸಿದ್ದಾರೆ.
2026ರ ಅಮೆರಿಕ ಆರ್ಥಿಕ ವರ್ಷದಲ್ಲಿನ ರಾಷ್ಟ್ರೀಯ ರಕ್ಷಣಾ ಅಧಿಕೃತಗೊಳಿಸುವಿಕೆ ಕಾಯ್ದೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗಷ್ಟೇ ಸಹಿಹಾಕಿದ್ದರು ಎಂದು ರಮೇಶ್ ಎಕ್ಸ್ ನಲ್ಲಿ ಪ್ರಸಾರ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
3100 ಪುಟಗಳಿರುವ ಈ ಕಾಯ್ದೆಯ 1912ನೇ ಪುಟದಲ್ಲಿ ಅಮೆರಿಕ ಹಾಗೂ ಭಾರತದ ಕುರಿತು ಅಣ್ವಸ್ತ್ರ ಬಾಧ್ಯತಾ ನಿಯಮಗಳ ಜಂಟಿ ವೌಲ್ಯಮಾಪನದ ಪ್ರಸ್ತಾವನೆಯಿದೆ ಎಂದವರು ಹೇಳಿದರು. ಶಾಂತಿ ಕಾಯ್ದೆಯನ್ನು ಟ್ರಂಪ್ ಕಾಯ್ದೆ (ರಿಯಾಕ್ಟರ್ ಬಳಕೆ ಹಾಗೂ ನಿರ್ವಹಣಾ ಭರವಸೆ ಕಾಯ್ದೆ) ಎಂಬುದಾಗಿಯೂ ಕರೆಯಬಹುದಾಗಿದೆಯೆಂದು ಜೈರಾಮ್ ರಮೇಶ್ ಕುಟುಕಿದ್ದಾರೆ.
ಶಾಂತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಸಂದರ್ಭ ಸದನದಲ್ಲಿ ಮಾತನಾಡಿದ್ದ ರಮೇಶ್ ಅವರು, ಅಣುಶಕ್ತಿ ಮೂಲಸೌಕರ್ಯವನ್ನು ನಿರ್ಮಿಸುವಾಗ ಸಾರ್ವಜನಿಕ ವಲಯವನ್ನು ಬಲಿಗೊಟ್ಟು ಖಾಸಗಿ ವಲಯವನ್ನು ಉತ್ತೇಜಿಸಬಾರದೆಂದು ಪ್ರತಿಪಾದಿಸಿದ್ದರು. ದೇಶದ ಅಣುವಿದ್ಯುತ್ ಸಾಮರ್ಥ್ಯವನ್ನು ಉತ್ತೇಜಿಸಲು ಲಭ್ಯವಿರುವ ಸ್ವದೇಶಿ ತಂತ್ರಜ್ಞಾನವನ್ನು ಉತ್ತೇಜಿಸಬೇಕೆಂದು ಅವರು ಕರೆ ಆಗ್ರಹಿಸಿದ್ದರು.
ಈ ವಾರದ ಆರಂಭದಲ್ಲಿ ಪ್ರಧಾನಿಯವರು ಸಂಸತ್ ಮೂಲಕ ಶಾಂತಿ ಮಸೂದೆಯನ್ನು ಯಾಕೆ ಹೇರಿದ್ದಾರೆಂದು ನಮಗೀಗ ಖಚಿತವಾಗಿದೆ. ಸಂಸತ್ ನಲ್ಲಿ ಅವಿರೋಧವಾಗಿ ಅಂಗೀಕರಿಸಲಾಗಿದ್ದ 2010ರ ಪರಮಾಣು ಹಾನಿ ಕಾಯ್ದೆಯ ಪ್ರಮುಖ ನಿಬಂಧನೆಗಳನ್ನು ಶಾಂತಿ ಮಸೂದೆಯು ಕೈಬಿಟ್ಟಿದೆ. ಪ್ರಧಾನಿಯವರ ಒಂದು ಕಾಲದ ಅತ್ಯುತ್ತಮ ಗೆಳೆಯನ ಜೊತೆ ಶಾಂತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಹೇಳಿದ್ದಾರೆ.