×
Ad

ವಿಶ್ವಸಂಸ್ಥೆಯಲ್ಲಿ ಗಾಝಾ ಕದನವಿರಾಮ ನಿರ್ಣಯಕ್ಕೆ ಗೈರು: ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ದಾಳಿ

Update: 2025-06-14 21:40 IST

  ನರೇಂದ್ರ ಮೋದಿ ,  ಮಲ್ಲಿಕಾರ್ಜುನ ಖರ್ಗೆ | PTI 

ಹೊಸದಿಲ್ಲಿ : ಗಾಝಾದಲ್ಲಿ ಕದನವಿರಾಮಕ್ಕಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯದ ಸಂದರ್ಭ ಮತದಾನದಿಂದ ದೂರವುಳಿದಿದ್ದಕ್ಕಾಗಿ ಕೇಂದ್ರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್,ಭಾರತದ ವಿದೇಶಾಂಗ ನೀತಿಯು ಗೊಂದಲಮಯ ಸ್ಥಿತಿಯಲ್ಲಿದೆ ಎಂದು ಆರೋಪಿಸಿದೆ.

ಭಾರತವು ಯುದ್ಧ ಮತ್ತು ನರಮೇಧದ ವಿರುದ್ಧ ಮತ್ತು ನ್ಯಾಯಕ್ಕಾಗಿ ತನ್ನ ತಾತ್ವಿಕ ನಿಲುವನ್ನು ಕೈಬಿಟ್ಟಿದೆಯೇ ಎಂಬ ಪ್ರಶ್ನೆಗೆ ಸರಕಾರವು ಉತ್ತರಿಸಬೇಕು ಎಂದೂ ಕಾಂಗ್ರೆಸ್ ಆಗ್ರಹಿಸಿದೆ.

‘ನಮ್ಮ ವಿದೇಶಾಂಗ ನೀತಿಯು ಗೊಂದಲಮಯ ಸ್ಥಿತಿಯಲ್ಲಿದೆ ಎನ್ನುವುದು ಈಗ ಹೆಚ್ಚು ಸ್ಪಷ್ಟವಾಗಿದೆ. ಬಹುಶಃ ಪ್ರಧಾನಿ ನರೇಂದ್ರ ಮೋದಿಯವರು ಈಗ ತನ್ನ ವಿದೇಶಾಂಗ ವ್ಯವಹಾರಗಳ ಸಚಿವರ ಪುನರಾವರ್ತಿತ ತಪ್ಪುಗಳ ಬಗ್ಗೆ ನಿರ್ಣಯವೊಂದನ್ನು ತೆಗೆದುಕೊಳ್ಳಬೇಕು ಮತ್ತು ಕೆಲ ಹೊಣೆಗಾರಿಕೆಯನ್ನು ನಿಗದಿಗೊಳಿಸಬೇಕು’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘149 ದೇಶಗಳು ಗಾಝಾದಲ್ಲಿ ಕದನವಿರಾಮಕ್ಕಾಗಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯದ ಪರವಾಗಿ ಮತ ಚಲಾಯಿಸಿದ್ದರೆ,ಮತದಾನದಿಂದ ದೂರವುಳಿದ 19 ದೇಶಗಳಲ್ಲಿ ಭಾರತವು ಒಂದಾಗಿತ್ತು. ದಕ್ಷಿಣ ಏಶ್ಯಾ,ಬ್ರಿಕ್ಸ್ ಮತ್ತು ಎಸ್‌ಸಿಒ(ಶಾಂಘೈ ಸಹಕಾರ ಸಂಘಟನೆ) ದೇಶಗಳ ಪೈಕಿ ಮತದಾನದಿಂದ ದೂರವುಳಿದಿದ್ದ ಏಕೈಕ ದೇಶವಾಗಿತ್ತು. ತನ್ಮೂಲಕ ನಾವು ಅಕ್ಷರಶಃ ಪ್ರತ್ಯೇಕವಾಗಿ ನಿಂತಿದ್ದೇವೆ’ ಎಂದು ಅವರು ಹೇಳಿದ್ದಾರೆ.

2023,ಅ.7ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ್ದ ದಾಳಿಗಳನ್ನು ಕಾಂಗ್ರೆಸ್ ಖಂಡಿಸಿತ್ತು ಎಂದು ನೆನಪಿಸಿರುವ ಖರ್ಗೆ,

‘ಗಾಝಾ ಪಟ್ಟಿಗೆ ಮುತ್ತಿಗೆ ಮತ್ತು ಅದರ ಮೇಲೆ ಬಾಂಬ್ ದಾಳಿಗಳಿಗಾಗಿ ನಾವು ಇಸ್ರೇಲ್‌ನ್ನು ನಿರಂತರವಾಗಿ ಖಂಡಿಸುತ್ತಲೇ ಬಂದಿದ್ದೇವೆ. 60,000 ಜನರು ಮೃತಪಟ್ಟಿದ್ದಾರೆ ಮತ್ತು ಅಲ್ಲಿ ವ್ಯಾಪಕ ಮತ್ತು ಭಯಂಕರ ಮಾನವೀಯ ಬಿಕ್ಕಟ್ಟು ತಲೆದೋರಿದೆ ’ ಎಂದಿದ್ದಾರೆ.

‘ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಶ್ಯಾದಲ್ಲಿ ಕದನವಿರಾಮ,ಶಾಂತಿ ಮತ್ತು ಮಾತುಕತೆಗೆ ಪ್ರತಿಪಾದಿಸುವ ಭಾರತದ ಸ್ಥಿರ ನಿಲುವನ್ನು ನಾವು ಕೈಬಿಟ್ಟಿದ್ದೇವೆಯೇ?’ ಎಂದೂ ಅವರು ಪ್ರಶ್ನಿಸಿದ್ದಾರೆ.

ಈ ನಿಲುವು ಅಲಿಪ್ತ ನೀತಿ ಮತ್ತು ನೈತಿಕ ರಾಜತಾಂತ್ರಿಕತೆಯ ಭಾರತದ ದೀರ್ಘಕಾಲಿಕ ಸಂಪ್ರದಾಯದಲ್ಲಿ ಆಳವಾಗಿ ಬೇರೂರಿದೆ,ತನ್ಮೂಲಕ ಭಾರತವು ಯಾವಾಗಲೂ ಜಾಗತಿಕ ಸಂಘರ್ಷಗಳಲ್ಲಿ ನ್ಯಾಯ ಮತ್ತು ಶಾಂತಿಯನ್ನು ಉತ್ತೇಜಿಸಿದೆ ಎಂದು ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಮತ್ತು ವಯನಾಡ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಗಾಝಾ ಕದನವಿರಾಮ ನಿರ್ಣಯ ಕುರಿತಂತೆ ಮೋದಿ ಸರಕಾರದ ನಡೆಯನ್ನು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News