ಓಬಿಸಿ, ಪರಿಶಿಷ್ಟರ ಒಡೆದು ಆಳುವ ಮೋದಿ ಸರಕಾರ : ‘ ಭಾಗೀದಾರಿ ನ್ಯಾಯ ಸಮ್ಮೇಳನ’ದಲ್ಲಿ ಖರ್ಗೆ ಕಿಡಿ
ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ,ಜು.25: ಇತರ ಹಿಂದುಳಿದ ವರ್ಗಗಳನ್ನು (ಓಬಿಸಿ) ಸಮಾಜದ ಮುನ್ನೆಲೆಗೆ ತರುವ ಯೋಜನೆಯೊಂದನ್ನು ತನ್ನ ಪಕ್ಷವು ಸಿದ್ಧಪಡಿಸಿದೆಯೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ತಿಳಿಸಿದ್ದಾರೆ. ಈ ವರ್ಗಗಳಿಗಾಗಿ ನೂತನ ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸುವಂತೆ ಅವರು ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ನೀಡಿದ್ದಾರೆ.
ಹೊಸದಿಲ್ಲಿಯ ತಾಲ್ ಕೋಟಾ ಸ್ಟೇಡಿಯಂನಲ್ಲಿ ಶುಕ್ರವಾರ ಓಬಿಸಿ ಸಮುದಾಯಗಳ ‘ ಭಾಗೀದಾರಿ ನ್ಯಾಯ ಸಮ್ಮೇಳನ’ವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 11 ವರ್ಷಗಳಿಂದ ಮೋದಿ ಸರಕಾರವು ಹಿಂದುಳಿದವರ, ಪರಿಶಿಷ್ಟರ ಅಥವಾ ಮಹಿಳೆಯರ ಕಲ್ಯಾಣಕ್ಕೆ ಯಾವುದೇ ದೃಢವಾದ ಕ್ರಮಗಳನ್ನು ಕೈಗೊಂಡಿಲ್ಲವೆಂದು ಆಪಾದಿಸಿದರು.
ಪ್ರಧಾನಿ ಮೋದಿಯವರು ಬಡವರು, ದಮನಿತರು ಹಾಗೂ ಹಿಂದುಳಿದವರ್ಗಗಳಿಗೆ ಮೀಸಲಾತಿಯನ್ನು ನೀಡಲು ಸಿದ್ಧರಿಲ್ಲ. ಹೀಗಾಗಿ, ಇವರೆಲ್ಲರೂ ಒಗ್ಗೂಡಬೇಕಾಗಿದೆ ಹಾಗೂ ತಮಗೆ ಬೇಕಾಗಿರುವುದನ್ನು ಸಾಧಿಸಲು ಪರಸ್ಪರ ನೆರವಾಗಬೇಕಿದೆ ಎಂದವರು ಕರೆ ನೀಡಿದರು.
ಕೇಂದ್ರ ಸರಕಾರವು ಹಿಂದುಳಿದವರನ್ನು ಹಾಗೂ ಪರಿಶಿಷ್ಟ ಜಾತಿಗಳನ್ನು ವಿಭಜಿಸಲು ಯತ್ನಿಸುವ ಮೂಲಕ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆಂದು ಹೇಳಿದರು.
ದೇಶಾದ್ಯಂತ ಸಾಮಾಜಿಕ-ಆರ್ಥಿಕ ಸಮೀಕ್ಷೆ (ಜಾತಿಗಣತಿ)ಯನ್ನು ನಡೆಸುವ ಅಗತ್ಯವಿದೆಯೆಂದು ಕಾಂಗ್ರೆಸ್ ಅಧ್ಯಕ್ಷರು ಪ್ರತಿಪಾದಿಸಿದರು. ತೆಲಂಗಾಣ ಸರಕಾರ ಜಾತಿಗಣತಿ ವರದಿಯನ್ನು ಈಗಾಗಲೇ ಸಿದ್ಧಪಡಿಸಿದೆ ಹಾಗೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಇದೇ ಮಾದರಿಯ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ ಎಂದರು.
ಒಂದಲ್ಲ ಒಂದು ದಿನ ಹಿಂದುಳಿದ ವರ್ಗಗಳ ಜನತೆ ಸಿಡಿದೆದ್ದು, ತನ್ನ ಕುರ್ಚಿಯನ್ನು ಕಸಿಯಲಿದ್ದಾರೆಂಬುದು ಕೂಡಾ ಮೋದಿಗೆ ತಿಳಿದಿದೆ ಎಂದರು.
ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, 75 ವರ್ಷದ ಆನಂತರ ಜನರು ನಿವೃತ್ತರಾಗುವ ಬಗ್ಗೆ ಮಾತನಾಡುತ್ತಿದೆ. ಈ ನಿಯಮವನ್ನೇ ಉಲ್ಲೇಖಿಸಿ, ಪ್ರಧಾನಿಯವರು ಎಲ್.ಕೆ. ಆಡ್ವಾಣಿ ಅಥವಾ ಮುರಳಿ ಮನೋಹರ ಜೋಶಿಯವರಂತಹ ಹಲವು ಹಿರಿಯ ಬಿಜೆಪಿ ನಾಯಕರನ್ನು ಹೊರದಬ್ಬಿ, ಅವರನ್ನು ಮಾರ್ಗದರ್ಶಕ ಮಂಡಳಿಯಲ್ಲಿ ನೇಮಿಸಿದ್ದರು ಎಂದು ಆಪಾದಿಸಿದರು.
‘‘ಪ್ರಧಾನಿ 75 ವರ್ಷಗಳನ್ನು ಪೂರ್ತಿಗೊಳಿಸಿದ್ದಾರೆ. ಅವರು ಯಾವಾಗ ನಿರ್ಗಮಿಸಲಿದ್ದಾರೆ’’ ಎಂದವರು ಪ್ರಶ್ನಿಸಿದರು. ಮೋದಿಯವರು ಇತರ ಎಲ್ಲರನ್ನೂ ಹೊರದಬ್ಬಿದ್ದಾರೆ. ದೇಶದ ಬಗ್ಗೆ ಮೋದಿಯವರಿಗೆ ಯಾವುದೇ ಕಾಳಜಿ ಇಲ್ಲ. ಅವರು ಕೇವಲ ತನ್ನ ಕುರ್ಚಿಯ ಬಗ್ಗೆ ಚಿಂತಿಸುತ್ತಿದ್ದಾರೆ ಎಂದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಶನ್ ಸಿಂಧೂರ್ ಹಾಗೂ ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ತಾನೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಸಂಸತ್ ನಲ್ಲಿ ತಾನು ಮಾತನಾಡುವುದಾಗಿ ಖರ್ಗೆ ಹೇಳಿದರು.
ಬಿಜೆಪಿಯು ಬಡವರ ನಿರ್ನಾಮವನ್ನು ಬಯಸುತ್ತಿದೆ ಹಾಗೂ ಅವರ ಮತದಾನದ ಹಕ್ಕುಗಳನ್ನು ಕಸಿಯುತ್ತದೆ ಎಂದವರು ಆಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಘೋಷಣೆಗಳನ್ನಷ್ಟೇ ನೀಡುತ್ತಾರೆ ಮತ್ತು ಹಿಂದುಳಿದವರು, ದಮನಿತರು ಹಾಗೂ ಬಡವರನ್ನು ವಿಭಜಿಸುವ ಮೂಲಕ ಒಡೆದು ಆಳುವ ನೀತಿಯನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
► ಕದನವಿರಾಮ: ಟ್ರಂಪ್ ಹೇಳಿಕೆ ಬಗ್ಗೆ ಮೋದಿ ಯಾಕೆ ಮೌನ
‘‘ ಮೋದಿಜೀ ಅವರು ಕದನವಿರಾಮದ ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಒಂದು ವೇಳೆ ಓರ್ವ ವ್ಯಕ್ತಿಯು ಭಾರತ ಹಾಗೂ ಪಾಕಿಸ್ತಾನ ನಡುವೆ ಕದನವಿರಾಮ ಏರ್ಪಡಿಸಿದ್ದು ತಾನೇ ಎಂದು 25 ಸಲ ಹೇಳಿದಾಗಲೂ ನೀವು ಯಾಕೆ ಪ್ರತಿಕ್ರಿಯಿಸುತ್ತಿಲ್ಲ?. ನಿಮಗೆ ಧ್ವನಿಯಿಲ್ಲವೇ?. ಅಥವಾ ನೀವು ಕಿವುಡರೇ ಇಲ್ಲ ಮೂಕರೇ, ಕುರುಡರೇ?. ನೀವು ದೇಶವನ್ನು ರಕ್ಷಿಸಲಿಲ್ಲ. ಸಾಮಾಜಿಕ ನ್ಯಾಯವನ್ನು ಒದಗಿಸಲಿಲ್ಲ. ಕೇವಲ ಆರೆಸ್ಸೆಸ್ ಬಳಿಗೆ ಹೋಗುತ್ತಿರುತ್ತೀರಿ’’ ಎಂದು ಖರ್ಗೆ ಹೇಳಿದರು.