×
Ad

‘ಅಕ್ಬರನಲ್ಲಿ ಆತನ ಕಾಲವನ್ನು ಮೀರಿದ ಪ್ರಜಾಪ್ರಭುತ್ವ ಚಿಂತನೆಗಳಿದ್ದವು’: ಜಿ20 ನಿಯತಕಾಲಿಕೆಯಲ್ಲಿ ಮೊಘಲ್‌ ದೊರೆಯನ್ನು ಶ್ಲಾಘಿಸಿದ ಮೋದಿ ಸರಕಾರ

Update: 2023-09-13 13:37 IST

ಪ್ರಧಾನಿ ಮೋದಿ (PTI) / ಮೊಘಲ್ ಚಕ್ರವರ್ತಿ ಅಕ್ಬರ್ (Credit:ountercurrents.org)

ಹೊಸದಿಲ್ಲಿ: ಮುಸ್ಲಿಮರ ಮೇಲೆ ಹಾಗೂ ವಿಶೇಷವಾಗಿ ಮೊಘಲರ ಮೇಲೆ ಅಪಪ್ರಚಾರಗಳನ್ನು, ದ್ವೇಷವನ್ನೂ ಅತಿಯಾಗಿ ಹರಡುವ ಬಲಪಂಥೀಯ ರಾಜಕಾರಣಕ್ಕಿಂತ ಭಿನ್ನವಾಗಿ ಕೇಂದ್ರ ಸರ್ಕಾರವು ಜಿ20 ಶೃಂಗಸಭೆ ಅಂಗವಾಗಿ ಬಿಡುಗಡೆಗೊಳಿಸಿರುವ ನಿಯತಕಾಲಿಕದಲ್ಲಿ ಮೊಘಲ್‌ ದೊರೆ ಅಕ್ಬರ್‌ನನ್ನು ಹೊಗಳಿದೆ.

ಸೆ. 09 ಮತ್ತು 10 ರಂದು ದೆಹಲಿಯಲ್ಲಿ ನಡೆದ G20 ಶೃಂಗಸಭೆ ಸಂದರ್ಭದಲ್ಲಿ ಬಿಡುಗಡೆಯಾದ ನಿಯತಕಾಲಿಕದಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ಅವರನ್ನು ಹೊಗಳಿರುವುದು ರಾಷ್ಟ್ರ ಮಟ್ಟದಲ್ಲಿ ಹೊಸ ಚರ್ಚೆಗೆ ನಾಂದಿಯಾಗಿದೆ.

PDF ರೂಪದಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುವ 52 ಪುಟಗಳ G20 ನಿಯತಕಾಲಿಕದಲ್ಲಿ, ಮೋದಿ ಸರ್ಕಾರವು ಮೊಘಲ್ ಚಕ್ರವರ್ತಿ ಅಕ್ಬರ್ ಅವರನ್ನು "ಶಾಂತಿ ಮತ್ತು ಪ್ರಜಾಪ್ರಭುತ್ವದ ಪ್ರತಿಪಾದಕ" ಎಂದು ಕರೆದಿದೆ. ಅಕ್ಬರ್‌ನ "ಪ್ರಜಾಪ್ರಭುತ್ವದ ಚಿಂತನೆಯು ಅಸಾಮಾನ್ಯ ಮತ್ತು ಆತನ ಕಾಲಮಾನಕ್ಕಿಂತ ಸಾಕಷ್ಟು ಮುಂದೆ ಇದೆ” ಎಂದು ಹೇಳಿದೆ.

“ಯಾವುದೇ ಧಾರ್ಮಿಕ ಪಕ್ಷಪಾತವಿಲ್ಲದೆ ಪ್ರತಿಯೊಬ್ಬರ ಹಿತಾಸಕ್ತಿಯು ನಿರತವಾಗಿರುವುದು ಉತ್ತಮ ಆಡಳಿತವಾಗಿದೆ. ಮೂರನೇ ಮೊಘಲ್ ದೊರೆ, ಅಕ್ಬರ್ ಕೂಡ ಇದೇ ರೀತಿಯ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದರು. ಧರ್ಮದ ಆಧಾರದ ಮೇಲೆ ತಾರತಮ್ಯದ ವಿರುದ್ಧ ಕ್ರಮಗಳನ್ನು ಕೈಗೊಂಡ ಅವರು ಸುಲ್-ಎ-ಕುಲ್ ಅಂದರೆ ವಿಶ್ವ ಶಾಂತಿಯ ತತ್ವವನ್ನು ಪರಿಚಯಿಸಿದರು. ಸಾಮರಸ್ಯ ಮತ್ತು ಸಹಿಷ್ಣು ಸಮಾಜವನ್ನು ರಚಿಸಲು, ಅವರು ದೀನ್-ಇ-ಇಲಾಹಿ ಧರ್ಮವನ್ನು ಪ್ರತಿಪಾದಿಸಿದರು ಮತ್ತು ಆಚರಿಸಿದರು” ಎಂದು ಅಕ್ಬರ್‌ ಬಗ್ಗೆ ವಿವರಿಸಲಾಗಿದೆ.

ಅಕ್ಬರ್‌ ಸ್ಥಾಪಿಸಿದ ಪ್ರಾರ್ಥನಾ ಮಂದಿರದಲ್ಲಿ ವಿವಿಧ ಪಂಗಡಗಳ ಬುದ್ಧಿಜೀವಿಗಳು ಮತ್ತು ಧಾರ್ಮಿಕ ಮುಖಂಡರು ಅಕ್ಬರ್‌ ಉಪಸ್ಥಿತಿಯಲ್ಲಿ ಸೇರಿ, ಚರ್ಚೆ ನಡೆಸುತ್ತಿದ್ದರು. ಅಕ್ಬರ್ ನವರತ್ನ ಎಂಬ ತನ್ನ ಪರಿಷತ್ತಿನ ಒಂಬತ್ತು ವಿದ್ವಾಂಸರೊಂದಿಗೆ ಸಮಾಲೋಚಿಸಿ ತನ್ನ ಸಾರ್ವಜನಿಕ ಕಲ್ಯಾಣ ನೀತಿಗಳನ್ನು ಜಾರಿಗೆ ತರುತ್ತಿದ್ದ. ಅಕ್ಬರನ ಪ್ರಜಾಸತ್ತಾತ್ಮಕ ಸಿದ್ಧಾಂತವು ಅಸಾಮಾನ್ಯವಾಗಿತ್ತು ಮತ್ತು ಆತನ ಕಾಲಮಾನಕ್ಕಿಂತ ಬಹಳ ಮುಂದಿತ್ತು” ಎಂದು ಅಕ್ಬರ್‌ ಬಗ್ಗೆ ಸಂಕ್ಷಿಪ್ತ ವಿವರವನ್ನು ಒದಗಿಸಲಾಗಿದೆ.

ನಿಯತಕಾಲಿಕೆಯಲ್ಲಿ ಶಿವಾಜಿ ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆಯೂ ವಿವರಿಸಲಾಗಿದೆ.

ಆದರೆ, ಮುಸ್ಲಿಂ ದೊರೆಗಳ ಇತಿಹಾಸವನ್ನು ತಿರುಚಿ ಅದರಲ್ಲೂ ಮೊಘಲ್‌ ಅರಸರ ಬಗ್ಗೆ ಅಪಪ್ರಚಾರಗಳನ್ನು ನಡೆಸುತ್ತಲೇ ಬಂದಿರುವ ಬಿಜೆಪಿ ಹಾಗೂ ಬಲಪಂಥೀಯ ರಾಜಕೀಯದ ಹೊರತಾಗಿಯೂ ಜಾಗತಿಕ ಸಮಾವೇಶದಲ್ಲಿ ಅಕ್ಬರನ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊಂಡಾಡಿರುವುದು ನೆಟ್ಟಿಗರ ಗಮನ ಸೆಳೆದಿದೆ.

ಜಿ20 ಶೃಂಗಸಭೆಗೆ ಬಂದ ವಿಶ್ವ ನಾಯಕರೊಂದಿಗೆ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಸಾಮೂಹಿಕ ನಮನ ಸಲ್ಲಿಸಿದ ಬಗ್ಗೆಯೂ ಇಂಟರ್‌ನೆಟ್‌ ಬಳಕೆದಾರರು ಚರ್ಚೆ ನಡೆಸಿದ್ದರು.

ಬಲಪಂಥೀಯ ರಾಜಕಾರಣ ದೇಶೀಯ ಮಟ್ಟದಲ್ಲಿ ಎಷ್ಟೇ ವಿರೋಧಿಸಿದರೂ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಹಾನ್‌ ವ್ಯಕ್ತಿತ್ವಗಳೇ ದೇಶವನ್ನು ಗುರುತಿಸುವಂತೆ ಮಾಡುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News